ಪುತ್ತೂರಿನಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆಯಿಂದ ಕೋವಿಡ್ ನಿರ್ವಹಣೆ ಕುಂಠಿತ: ಬಡಗನ್ನೂರು

Update: 2021-06-19 07:40 GMT

 ಪುತ್ತೂರು, ಜೂ.19: ಕೋವಿಡ್ ನಿರ್ವಹಣೆಯ ವಿಚಾರದಲ್ಲಿ ಎಲ್ಲೆಡೆ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದರೂ ಪುತ್ತೂರಿನಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿ ನಿರ್ವಹಣೆ ಕಾರ್ಯ ಕುಂಠಿತಗೊಂಡಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮುಹಮ್ಮದ್ ಬಡಗನ್ನೂರು ಆರೋಪಿಸಿದ್ದಾರೆ.

ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ತಾಲೂಕು ಕಟ್ಟದ ಸಭೆಯೊಂದರಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳೇ ಇತರ ಅಧಿಕಾರಿಗಳ ಅಸಹಕಾರದಿಂದ ಬೇಸತ್ತು ಸಭೆಯಿಂದ ಹೊರ ನಡೆದಿದ್ದಾರೆ. ಇದು ದುರಂತವಾಗಿದೆ. ಕಾರ್ಯಾಂಗ ಸರಿಯಾಗಿ ಕೆಲಸ ನಿರ್ವಹಿಸದಿದ್ದಾಗ ಶಾಸಕಾಂಗದ ಭಾಗವಾಗಿರುವ ಶಾಸಕರು ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಪುತ್ತೂರಿನಲ್ಲಿ ಕೋವಿಡ್ ವಿಚಾರದಲ್ಲಿ ಸೀಮಿತ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಶಾಸಕರ ಕೃಪಾಕಟಾಕ್ಷದಿಂದ ಕೆಲಸ ಮಾಡದೆ ಕಚೇರಿಯಲ್ಲಿಯೇ ಕುಳಿತು ದಿನ ಕಳೆಯುತ್ತಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರು ಲಾಕ್‌ಡೌನ್ ಸಂದರ್ಭದಲ್ಲಿ ಓಡಾಟ ಮಾಡುವ ಜನರಿಗೆ ಲಾಠಿ ಬೀಸುವ ಬದಲು ಕೆಲಸ ಮಾಡದ ಅಧಿಕಾರಿಗಳಿಗೆ ಚಾಟಿ ಬೀಸುವ ಕೆಲಸ ಮಾಡಬೇಕು. ಇಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಯೇ ಅಭಿವೃದ್ಧಿ ಎಂದು ಬಿಂಬಿಸುವ ಸರ್ಕಾರಕ್ಕೆ ಆತ್ಮವೇ ಇಲ್ಲ. ಕೊರೋನದಿಂದ ಜನರು ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರವು ಕಳೆದ 3 ದಿನಗಳಿಂದ ಕುರ್ಚಿ ಉಳಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಸರ್ಕಾರಿ ಹಣದಲ್ಲಿ ಖಾಸಗಿ ಚರ್ಚೆಗಳನ್ನು ನಡೆಸುತ್ತಿರುವ ಸರ್ಕಾರ ಮಾನವ ಸಂಪನ್ಮೂಲಗಳಿಗೆ ಹೊಡೆತ ನೀಡುತ್ತಿದೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ದೆಹಲಿ ಸರ್ಕಾರವು 3 ತಿಂಗಳ ವಿದ್ಯುತ್ ಬಿಲ್ಲುಗಳನ್ನು ಮನ್ನಾ ಮಾಡಿದೆ. ಆದರೆ ನಮ್ಮ ರಾಜ್ಯ ಸರ್ಕಾರ ವಿದ್ಯುತ್ ಬಿಲ್ಲುಗಳನ್ನು ಹೆಚ್ಚುಮಾಡಿದೆ. ದಹಲಿ ಮಾದರಿಯಲ್ಲಿ ಇಲ್ಲಿಯೂ ವಿದ್ಯುತ್ ಬಿಲ್ಲುಗಳನ್ನು ಮನ್ನಾ ಮಾಡಬೇಕು. ಅಲ್ಲದೆ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವವರಿಗೆ ಮತ್ತು ಅಡಿಕೆ ಕೊಳೆ ರೋಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಸುಳ್ಳಿನ ಸರಮಾಲೆಯಲ್ಲಿಯೇ ಅಧಿಕಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತಿದ್ದಾರೆ. ಪೆಟ್ರೋಲ್ ಬೆಲೆ ಇಳಿಸುತ್ತೇವೆ ಎಂದು ಅಧಿಕಾರ ಪಡೆದ ಬಿಜೆಪಿ ಸರ್ಕಾರವು ಇದೀಗ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿ ಅದಕ್ಕೆ ಸಬೂಬು ಹೇಳುತ್ತಿದೆ. ಬಿಜೆಪಿ ಆಡಳಿತದಿಂದ ದೇಶದ ಸ್ಥಿತಿ ಚಿಂತಾಜನಕವಾಗಿದೆ ಎಂದರು.

ಪಕ್ಷವನ್ನು ತಳಮಟ್ಟದಿಂದ ಸಂಘಟನೆಗೊಳಿಸುವಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಸಂಘಟನೆಯ ಕಾರ್ಯ ನಡೆಸಲಾಗುವುದು. ಅದಕ್ಕಾಗಿ ಬ್ಲಾಕ್ ಮಟ್ಟದಲ್ಲಿ ತಂಡ ರಚಿಸಿ, ಪ್ರತಿ ಗ್ರಾಮಕ್ಕೆ ಒಬ್ಬ ಉಸ್ತುವಾರಿಯನ್ನು ನೇಮಕ ಮಾಡಲಾಗುವುದು. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯಗಳನ್ನು ನಡೆಸಲಾಗುವುದು. ಪಕ್ಷದ ಕಚೇರಿಯಲ್ಲಿ ಸೇವಾ ಸಿಂಧು ಯೋಜನೆ ಸ್ಥಾಪಿಸಿ ಎಲ್ಲರಿಗೂ ಸೇವೆ ಒದಗಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News