ಉಡುಪಿ ನಗರ, ಪರ್ಕಳದಲ್ಲಿ ಸುಂಟರ ಗಾಳಿ; ಹಲವು ಮನೆಗಳಿಗೆ, ಶಾಲೆಗೆ ಹಾನಿ

Update: 2021-06-19 14:41 GMT

ಉಡುಪಿ, ಜೂ.19: ಉಡುಪಿ ನಗರದಲ್ಲಿ ಶನಿವಾರ ಮಧ್ಯಾಹ್ನ ವೇಳೆ ಬೀಸಿದ ಸುಂಟರಗಾಳಿಯಿಂದ ಉಡುಪಿ ನಗರ ಸೇರಿದಂತೆ ಪರ್ಕಳ ಹಾಗೂ ಇತರ ಕಡೆ ಗಳಲ್ಲಿ ಮರಗಳು ಧರೆಗೆ ಉರುಳಿ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಭಾರೀ ಗಾಳಿಯಿಂದಾಗಿ ನಗರದ ಜಾಮೀಯ ಮಸೀದಿಯ ಆವರಣದಲ್ಲಿ ರುವ ಬೃಹತ್ ಮರ ಬಿದ್ದು, ಸಮೀಪದ ಹಳೆ ಕಟ್ಟಡಕ್ಕೆ ಹಾನಿಯಾಗಿದೆ. ಅದೇ ರೀತಿ ನಗರದ ಬಡಗುಪೇಟೆಯ ವಾಸುಕೀ ದೇವಸ್ಥಾನ ಸಮೀಪದ ಮನೆಯ ಹೆಂಚು ಹಾರಿ ಹೋಗಿ ಹಾನಿಯಾಗಿರುವ ಬಗ್ಗೆ ತಿಳಿದುಬಂದಿದೆ.

ಪರ್ಕಳ ಬಿ.ಎಂ. ಹೈಸ್ಕೂಲ್ ಬಳಿ ಬೀಸಿದ ಸುಂಟರ ಗಾಳಿಯಿಂದ ಸಮೀಪದ ಗಜಾನನ ಕ್ಯಾಂಟೀನ್, ಶಂಕರ ಶೆಟ್ಟಿಗಾರ್ ಎಂಬವರ ಮನೆಯ ಹೆಂಚು ಹಾರಿ ಹೋಗಿದೆ. ಅದೇ ರೀತಿ ಬಿ.ಎಂ. ಹೈಸ್ಕೂಲಿನ ಹೆಂಚು ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ಪರ್ಕಳ ವಿಶ್ವ ಗ್ಲಾಸ್ ಹೌಸ್ನ ಗ್ಲಾಸಿನ ಪೆಟ್ಟಿಗೆ, ಎಲೆಕ್ಟ್ರಿಕ್, ಪಂಪು ರಿಪೇರಿಯ ಅಂಗಡಿ ಮತ್ತು ಹಾರ್ಡ್‌ವೇರ್ ಅಂಗಡಿಗೂ ಹಾನಿಯಾಗಿದೆ. ಅದೇ ರೀತಿ ಪರ್ಕಳ ಪರಿಸರದ ನಾಲ್ಕೈದು ಮರಗಳು ಕೂಡ ಧರೆಶಾಹಿಯಾಗಿದೆ.

ಜಿಲ್ಲೆಯಲ್ಲಿ ಲಕ್ಷಾಂತರ ರೂ. ನಷ್ಟ

ಬೈಂದೂರು ತಾಲೂಕಿನ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 3.5ಲಕ್ಷ ರೂ. ನಷ್ಟ ಉಂಟಾಗಿದೆ. ಉಪ್ಪುಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದ ಶೀಟ್ ಗಾಳಿಯಿಂದಾಗಿ ಹಾರಿ ಹೋಗಿ ಭಾಗಃ ಹಾನಿಯಾಗಿ ಸುಮಾರು 25,000 ನಷ್ಟವಾಗಿದೆ.

ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದ ಸುಶೀಲ ಎಂಬವರ ಮನೆಗೆ ಗಾಳಿಮಳೆಯಿಂದ ಮರ ಬಿದ್ದು ತೀವ್ರ ಹಾನಿಯಾಗಿದ್ದು, ಸುಮಾರು 150,000 ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಗಾಳಿಮಳೆಯಿಂದ ಎರಡು ಮನೆಗಳಿಗೆ ಹಾನಿಯಾಗಿ ಒಟ್ಟು 65,000ರೂ. ನಷ್ಟವಾಗಿದೆ. ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ರೋಕಿ ಡಿಸೋಜ ಎಂಬವರ ಮನೆಯ ಹೆಂಚು ಹಾರಿ ಹೋಗಿ ಭಾಗಶಃ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಳಿಮಳೆಗೆ ಉಡುಪಿಯಲ್ಲಿ 47, ಕುಂದಾಪುರದಲ್ಲಿ 12 ಸೇರಿದಂತೆ ಜಿಲ್ಲೆ ಯಲ್ಲಿ 59 ವಿದ್ಯುತ್ ಕಂಬಗಳು, ಉಡುಪಿಯಲ್ಲಿ ನಾಲ್ಕು ಟ್ರಾನ್ಸ್ ಫಾರ್ಮರ್ ಗಳು ಮತ್ತು ಜಿಲ್ಲೆಯಲ್ಲಿ ಒಟ್ಟು 1.07ಕಿ.ಮೀ. ಉದ್ದದ ವಿದ್ಯುತ್ ತಂತಿಗೆ ಹಾನಿಯಾಗಿದೆ. ಇದರಿಂದ ಸುಮಾರು 10.39ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಸಿದು ಬಿದ್ದ ಮಠದಬೆಟ್ಟು ಕಾಲುಸೇತುವೆ

ಭಾರೀ ಮಳೆಯಿಂದ ಇಂದ್ರಾಣಿ ಹೊಳೆ ತುಂಬಿ ಹರಿದ ಪರಿಣಾಮ ಶಿಥಿಲಾವಸ್ಥೆಯಲ್ಲಿದ್ದ ನಗರದ ಮಠದಬೆಟ್ಟುವಿನ ಕಾಲು ಸೇತುವೆಯ ಒಂದು ಭಾಗ ಇಂದು ಮಧ್ಯಾಹ್ನ ವೇಳೆ ಕುಸಿದು ಬಿದ್ದಿರುವ ಬಗ್ಗೆ ವರದಿ ಯಾಗಿದೆ.

ಇದರಿಂದ ಮಠದಬೆಟ್ಟು, ಕೊಪ್ಪರತೋಟ, ನಿಟ್ಟೂರು, ಗುಂಡಿಬೈಲುವಿಗೆ ಹೋಗುವ ಒಳದಾರಿಯ ಸಂಪರ್ಕ ಕಡಿತಗೊಂಡಿದೆ. ಮಠದಬೆಟ್ಟು, ಕೊಪ್ಪರ ತೋಟ ಪರಿಸರದಲ್ಲಿ ಹಲವು ಮನೆಗಳಿದ್ದು, ಇಲ್ಲಿಗೆ ಹೋಗಲು ಹಲವು ಕುಟುಂಬಗಳು ಈ ಕಾಲು ಸಂಕವನ್ನು ಅವಲಂಬಿಸಿಕೊಂಡಿವೆ.

ಇದೀಗ ಕುಸಿದು ಬಿದ್ದಿರುವ ಕಾಲು ಸಂಕವನ್ನು ಮಠದಬೆಟ್ಟು ಹಾಗೂ ಕೊಪ್ಪರತೋಟದ ಯುವಕರು ಸೇರಿ ಮರದ ದಿಮ್ಮಿಗಳನ್ನು ಇರಿಸಿ ತಾತ್ಕಾಲಿಕ ವಾಗಿ ದುರಸ್ತಿ ಮಾಡಿದರು. ಆದರೂ ತುಂಬಿ ಹರಿಯುವ ಇಂದ್ರಾಣಿ ನದಿ ಯನ್ನು ಈ ಸಂಕದ ಮೂಲಕ ದಾಟಲು ಜನ ಆತಂಕ ಪಡುವಂತಾಗಿದೆ. ಇಲ್ಲಿ ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News