ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದ ಸೋಲು: ಟಿಎಂಸಿಯ ನಾಲ್ವರು ಅಭ್ಯರ್ಥಿಗಳು ಹೈಕೋರ್ಟ್ ಗೆ ಮೊರೆ

Update: 2021-06-19 15:36 GMT

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಲ್ಲದೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದ  ತೃಣಮೂಲ ಕಾಂಗ್ರೆಸ್ ನ ನಾಲ್ವರು ಅಭ್ಯರ್ಥಿಗಳು ಫಲಿತಾಂಶಗಳ ಪರಿಶೀಲನೆಗಾಗಿ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ.

ನಾಲ್ಕು ಅರ್ಜಿಗಳನ್ನು ಕಲ್ಕತ್ತಾ ಹೈಕೋರ್ಟ್‌ನ ವಿವಿಧ ನ್ಯಾಯಾಧೀಶರು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಂಡರು. ಜೂನ್ ಅಂತ್ಯದಲ್ಲಿ ಹಾಗೂ  ಜುಲೈ ಆರಂಭದಲ್ಲಿ  ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

ಬಲರಾಂಪುರದಲ್ಲಿ ಬಿಜೆಪಿಯ ಬನೇಶ್ವರ ಮಹತೊ  ವಿರುದ್ಧ ಕೇವಲ 423 ಮತಗಳಿಂದ ಸೋತ ಶಾಂತಿರಾಮ್ ಮಹತೊ  ಮತ ಎಣಿಕೆಯಲ್ಲಿ ದುಷ್ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಮೂರ್ತಿ ಸುಭಾಸಿಸ್ ದಾಸ್‌ಗುಪ್ತಾ ಅವರು ಈ ವಿಷಯವನ್ನು ಆಲಿಸಿದ್ದು, ಈ ಕ್ಷೇತ್ರಕ್ಕೆ  ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು ನಿರ್ದೇಶಿಸಿದರು. ಮುಂದಿನ ವಿಚಾರಣೆಯನ್ನು  ಜುಲೈ 15 ರಂದು ನಿಗದಿಪಡಿಸಿದರು.

ಮೊಯ್ನಾದಲ್ಲಿ 1,260 ಮತಗಳಿಂದ ಬಿಜೆಪಿಯ ಅಶೋಕ್ ದಿಂಡಾ ವಿರುದ್ಧ ಸೋತ ಸಂಗ್ರಾಮ್ ಡೋಲುಯಿ, ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ನ್ಯಾಯಮೂರ್ತಿ ತೀರ್ಥಂಕರ್ ಘೋಷ್ ಅವರು ಈ ಪ್ರಕರಣದ ವಿಚಾರಣೆಗಾಗಿ ಜೂನ್ 25 ಅನ್ನು ನಿಗದಿಪಡಿಸಿದ್ದಾರೆ.

ಬಿಜೆಪಿಯ ಸ್ವಪನ್ ಮಜುಂದಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಸರಿಯಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಹಾಗೂ  ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ ನೀಡಿದ್ದಾರೆ ಎಂದು ಟಿಎಂಸಿಯ ಬೊಂಗಾನ್ ದಕ್ಷಿಣ ಅಭ್ಯರ್ಥಿ ಅಲೋರಾನಿ ಸರ್ಕಾರ್ ಅರ್ಜಿ  ಸಲ್ಲಿಸಿದರು. ಮಜುಂದಾರ್ 2,008 ಮತಗಳಿಂದ ಜಯ ಗಳಿಸಿದ್ದರು. ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಮೂರ್ತಿ ಬಿಬೆಕ್ ಚೌಧುರಿ ಬಿಜೆಪಿ ಅಭ್ಯರ್ಥಿಗೆ ನಿರ್ದೇಶನ ನೀಡಿದರು.

ಗೋಘಾಟ್‌ನಿಂದ ಸ್ಪರ್ಧಿಸಿ ಬಿಸ್ವಾನಾಥ್ ಕರಕ್ ವಿರುದ್ಧ 4,147 ಮತಗಳಿಂದ ಸೋತ ಮನಸ್ ಮಜುಂದಾರ್ ಹೈಕೋರ್ಟ್ ಮುಂದೆ ಬಿಜೆಪಿ ಅಭ್ಯರ್ಥಿ ತನ್ನ ಚುನಾವಣಾ ಆಯೋಗದ ಅಫಿಡವಿಟ್‌ನಲ್ಲಿ ತನ್ನ ಅಪರಾಧ ಪ್ರಕರಣಗಳ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ಆರೋಪಿಸಿದರು. ನ್ಯಾಯಮೂರ್ತಿ ಸುವ್ರಾ ಘೋಷ್ ಜುಲೈ 9 ರಂದು ಈ ವಿಷಯವನ್ನು ಆಲಿಸಲಿದ್ದಾರೆ.

ನಂದಿಗ್ರಾಮ ಅಸೆಂಬ್ಲಿ ಕ್ಷೇತ್ರದಲ್ಲಿ ಫಲಿತಾಂಶಗಳ ಮರು ಮೌಲ್ಯ ಮಾಪನಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ 1,956 ಮತಗಳಿಂದ ಸೋತಿದ್ದರು.

ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಕೌಶಿಕ್ ಚಂದ್ರ ಜೂನ್ 24ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News