ವಾರಾಂತ್ಯ ಕರ್ಫ್ಯೂಗೆ ವಿಟ್ಲ ಸ್ತಬ್ಧ; ಔಷಧ ಅಂಗಡಿ ಹೊರತುಪಡಿಸಿ ಬಾಕಿ ಎಲ್ಲಾ ಬಂದ್

Update: 2021-06-19 15:40 GMT

ಬಂಟ್ವಾಳ, ಜೂ.19: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ಮತ್ತು ರವಿವಾರ ಎರಡು ದಿನ ವಿಧಿಸಿರುವ ವಾರಾಂತ್ಯ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ದೊರೆತ್ತಿದ್ದು ಮೊದಲ ದಿನವಾದ ಶನಿವಾರ ವಿಟ್ಲ ಪೇಟೆ ಸಂಪೂರ್ಣ ಸ್ತಬ್ಧಗೊಂಡಿತು.

ವಿಟ್ಲ ವ್ಯಾಪ್ತಿಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ಶನಿವಾರ ಮತ್ತು ರವಿವಾರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಿ ಪಟ್ಟಣ ಪಂಚಾಯತ್ ಆಡಳಿತ ಆದೇಶ ಹೊರಡಿಸಿತ್ತು.

ದಿನ ಬಳಕೆಯ ವಸ್ತುಗಳ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ. ಜನರು ಪೇಟೆಗೆ ಕಾಲಿಡಲಿಲ್ಲ. ಬೆಳಗ್ಗೆ 6 ಗಂಟೆಯಿಂದ 9 ಗಂಟೆಯ ವರೆಗೆ ಹಾಲಿನ ಅಂಗಡಿ ತೆರೆದಿತ್ತು. ಔಷಧಿ ಅಂಗಡಿ ಎಂದಿನಂತೆ ಕಾರ್ಯಾಚರಿಸಿದೆ. ತುರ್ತು ಅವಶ್ಯಕತೆ ತೆರಳುವರಿಗೆ ವಿನಾಯಿತಿ ನೀಡಲಾಗಿದೆ.

ವಿಟ್ಲದ ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಬಂದ್ ಮಾಡಿದ್ದರು. ಸರಿಯಾದ ಕಾರಣ ನೀಡಿದವರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗುತ್ತಿತ್ತು. ನಾಳೆ (ಜೂ.20) ಕೂಡಾ ವಾರಾಂತ್ಯ ಕರ್ಫ್ಯೂ ಇರಲಿದ್ದು ಇದೇ ನಿಯಮಗಳು ಜಾರಿಯಲ್ಲಿರಲಿದೆ. 

ಎಲ್ಲರ ವರದಿ ನೆಗೆಟಿವ್: ವಿಟ್ಲ ಪಟ್ಟಣ ಪಂಚಾಯತ್ ಆಡಳಿತದ ನಿರ್ಣಯದಂತೆ ವಿಟ್ಲ ಪೇಟೆಗೆ ಆಗಮಿಸುವವರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು ಪ್ರಥಮ ದಿನ ಪರೀಕ್ಷೆಗೆ ಒಳಪಟ್ಟ ಎಲ್ಲಾ 80 ಮಂದಿಯ ವರದಿ ನೆಗೆಟಿವ್ ಬಂದಿದೆ. 

ವಿಟ್ಲ ವ್ಯಾಪ್ತಿಯಲ್ಲಿ ಕೊರೋನ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ ಎನ್ನಲಾಗಿದ್ದು ಇದರ ನಿಯಂತ್ರಣಕ್ಕಾಗಿ ವಿಟ್ಲ ಪೇಟೆಗೆ ಬರುವ ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಪಟ್ಟಣ ಪಂಚಾಯತ್ ನಿರ್ಣಯ ಕೈಗೊಂಡಿತ್ತು‌.

ನಿರ್ಣಯದಂತೆ ಮೊದಲ ದಿನವಾದ ಗುರುವಾರ ಪೇಟೆಗೆ ಬಂದು ಕೋವಿಡ್ ಪರೀಕ್ಷೆಗೆ ಒಳಗಾದ ಎಲ್ಲಾ 80 ಮಂದಿನ ವರದಿ ನೆಗೆಟಿವ್ ಬಂದಿದೆ. ಎರಡನೇ ದಿನವಾದ ಶುಕ್ರವಾರ ಪರೀಕ್ಷೆ ನಡೆಸಲಾದ 132 ಮಂದಿಯ ವರದಿ ಇನ್ನು ಬರಬೇಕಿದೆ.

ವಿಟ್ಲ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ನಾಡಕಚೇರಿ, ಮೇಗಿನಪೇಟೆ ಮೂರು ಕಡೆಗಳಲ್ಲಿ ವಿಟ್ಲ ಸಮುದಾಯ ಆರೋಗ್ಯದ ಕೇಂದ್ರದ ಮತ್ತು ಅಳಿಕೆಯ ಸಿಬ್ಬಂದಿ ಕೋವಿಡ್ ಪರೀಕ್ಷೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News