ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ: ಜನ ಸಂಚಾರ ವಿರಳ

Update: 2021-06-19 15:53 GMT

ಉಡುಪಿ, ಜೂ.19: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ವಿಧಿಸ ಲಾಗಿರುವ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ಉಡುಪಿ ನಗರ ಸೇರಿ ದಂತೆ ಜಿಲ್ಲೆಯಾದ್ಯಂತ ಜನ ಸಂಚಾರ ವಿರಳವಾಗಿತ್ತು.

ಬೆಳಿಗ್ಗೆ 6ರಿಂದ ಅಪರಾಹ್ನ 2 ಗಂಟೆಯವರೆಗೆ ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಕೇಂದ್ರಗಳು ತೆರೆದಿದ್ದವು. ಬೀದಿಬದಿ ವ್ಯಾಪಾರಸ್ಥರು, ಸರಕಾರಿ ಕಚೇರಿಗಳು, ಎಲ್ಲಾ ವೈದ್ಯ ಕೀು ಸೇವೆಗಳು ಕಾರ್ಯನಿರ್ವಹಿಸಿದ್ದವು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ತೀರಾ ಕಡಿಮೆ ಸಂಖ್ಯೆಯಲ್ಲಿ ಇರುವುದು ಕಂಡುಬಂತು. ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ವಾಹನ ತಾಪಸಣೆ ನಡೆಸಿದರು. ತುರ್ತು ಅವಶ್ಯಕತೆಗಳಿಗೆ ಓಡಾಟ ನಡೆಸುವ ವಾಹನಗಳಿಗೆ ಮಾತ್ರ ಪೊಲೀಸರು ಅವಕಾಶ ನೀಡಿದರು.

ಇಂದು ಉಡುಪಿ- 5, ಕಾರ್ಕಳ-3, ಕುಂದಾಪುರ-11 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 19 ದ್ವಿಚಕ್ರ ವಾಹನಗಳು ಮತ್ತು ಕುಂದಾಪುರ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡರು. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ ಕಾರ್ಕಳದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News