​ಕೋವಿಡ್ : ರಾಜ್ಯದ ಪಾಸಿಟಿವಿಟಿ ಶೇ.4.61, ಉಡುಪಿ ಶೇ.6.11ಕ್ಕೆ ಇಳಿಕೆ

Update: 2021-06-19 16:03 GMT

ಉಡುಪಿ, ಜೂ.19: ಶುಕ್ರವಾರ ಪ್ರಕಟವಾದ ಕರ್ನಾಟಕ ರಾಜ್ಯ ಕೋವಿಡ್- 19 ವಾರ್‌ರೂಮ್ ಅಂಕಿ ಅಂಶದಂತೆ ರಾಜ್ಯದ ಕೋವಿಡ್ ಸೋಂಕಿನ ಹಿಂದಿನ ಐದು ದಿನಗಳ ಪಾಸಿಟಿವಿಟಿ ಶೇ.4.6ಕ್ಕೂ, ಉಡುಪಿ ಜಿಲ್ಲೆಯ ಪಾಸಿಟಿವಿಟಿ ಶೇ.6.11ಕ್ಕೂ ಇಳಿದಿದೆ. ಇದೇ ಅವಧಿಯಲ್ಲಿ ದಕ್ಷಿಣ ಕನ್ನಡದ ಪಾಸಿಟಿವಿಟಿ ಪ್ರಮಾಣ ಶೇ.8.35 ಆದರೆ, ಉತ್ತರ ಕನ್ನಡದ್ದು ಶೇ.4.56ಕ್ಕೆ ಇಳಿದಿದೆ.

ರಾಜ್ಯದಲ್ಲೀಗ 19 ಜಿಲ್ಲೆಗಳ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕೆಳಕ್ಕಿಳಿದಿದೆ. ಇವುಗಳಲ್ಲಿ ಧಾರವಾಡ, ಶಿವಮೊಗ್ಗ, ವಿಜಯಪುರ, ತುಮಕೂರು, ಉತ್ತರ ಕನ್ನಡ , ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಬೆಂಗಳೂರು ನಗರ, ರಾಮನಗರ, ಬಾಗಲಕೋಟೆ, ಗದಗ್, ಹಾವೇರಿ, ರಾಯಚೂರು, ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳು ಸೇರಿವೆ. ಮೇ ತಿಂಗಳಲ್ಲಿ ಉಡುಪಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.40ರವರೆಗೂ ಏರಿಕೆ ಕಂಡಿತ್ತು.

ಮೈಸೂರು ಶೇ.12.38 ಪಾಸಿಟಿವಿಟಿ ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಾವಣಗೆರೆ ಶೇ.8.76ರೊಂದಿಗೆ ಎರಡನೇ, ದಕ್ಷಿಣ ಕನ್ನಡ ಮೂರನೇ ಹಾಗೂ ಚಿಕ್ಕಮಗಳೂರು (ಶೇ.7.85) ನಾಲ್ಕನೇ ಸ್ಥಾನದಲ್ಲಿವೆ.

ಗುಣಮುಖ ಪ್ರಮಾಣ 95.48ಕ್ಕೆ: ಇದರೊಂದಿಗೆ ಶೇ.80ರವರೆಗೂ ಇಳಿದಿದ್ದ ಜಿಲ್ಲೆಯ ಕೋವಿಡ್ ಸೋಂಕಿನ ಗುಣಮುಖ ಪ್ರಮಾಣ ನಿನ್ನೆಗೆ ಮತ್ತೆ ಶೇ.95.48ಕ್ಕೆ ಏರಿದೆ. ಎಪ್ರಿಲ್ ತಿಂಗಳವರೆಗೆ ಜಿಲ್ಲೆಯ ಗುಣಮುಖ ಪ್ರಮಾಣ ಶೇ.98ರ ಆಸುಪಾಸಿನಲ್ಲಿದ್ದುದ್ದು ಮೇ ತಿಂಗಳ ಮಧ್ಯಭಾಗದಲ್ಲಿ ಶೇ.80ಕ್ಕೆ ಇಳಿದಿದೆ.

ಸದ್ಯ ರಾಜ್ಯದ ಗುಣಮುಖ ಪ್ರಮಾಣ ಶೇ.93.36 ಆಗಿದೆ. ರಾಜ್ಯದ ಹೆಚ್ಚಿನೆಲ್ಲಾ ಜಿಲ್ಲೆಗಳಲ್ಲಿ ಇದರ ಪ್ರಮಾಣ ಏರುಮುಖವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮಾಣ ಶೇ.91.14 ಆದರೆ, ಉತ್ತರ ಕನ್ನಡದ ಪ್ರಮಾಣ 94.44, ಕೊಡಗು 93.55, ಶಿವಮೊಗ್ಗ 91.65, ಚಿಕ್ಕಮಗಳೂರು ಶೇ.92.27 ಇದೆ.

ಉಡುಪಿ ಸೇರಿದಂತೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಈಗಲೂ ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಇರುವವರ ಸಂಖ್ಯೆ ಅಧಿಕವಾಗಿದೆ. ಜೂ.16ಕ್ಕೆ ಸಿಕ್ಕಿದ ಮಾಹಿತಿಯಂತೆ ಹಿಂದಿನ 14 ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 3392 ಮಂದಿ ಪಾಸಿಟಿವ್ ಇದ್ದರೆ, ನಗರ ಭಾಗದಲ್ಲಿ ಇರುವವರ ಸಂಖ್ಯೆ 659 ಮಾತ್ರ. ಈ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ (6959) ಸೋಂಕಿತರು (ನಗರದಲ್ಲಿ 2126) ಗ್ರಾಮೀಣ ಭಾಗದಲ್ಲಿದ್ದಾರೆ. ಈಗ ಮೈಸೂರಿನಲ್ಲಿ ನಗರ-ಗ್ರಾಮೀಣ ಪಾಸಿಟಿವ್ ಸಂಖ್ಯೆ ಹೆಚ್ಚುಕಮ್ಮಿ (6741- 6103) ಸಮ ಪ್ರಮಾಣದಲ್ಲಿದೆ. ದಕ್ಷಿಣ ಕನ್ನಡದಲ್ಲಿ ನಗರ-ಗ್ರಾಮೀಣ ಪ್ರಮಾಣ ಜೂ.16ಕ್ಕೆ (5182-2836)ಆಗಿದೆ.

ಸದ್ಯ ಮೈಸೂರನ್ನು ಹೊರತು ಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲೇ ಸಕ್ರಿಯ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಹಾಗೆಯೇ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡವರ ಸಂಖ್ಯೆಯೂ ಗ್ರಾಮೀಣ ಭಾಗದಲ್ಲೇ ಹೆಚ್ಚಿದೆ.

ಕಳೆದ ಹತ್ತು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ತಲಾ 10 ಲಕ್ಷ ಜನಸಂಖ್ಯೆಗೆ 25,301 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪರೀಕ್ಷೆಯಲ್ಲಿ ಸದ್ಯ ಹಾಸನ ಜಿಲ್ಲೆ ರಾಜ್ಯದಲ್ಲೇ (36,186) ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕನ್ನಡದಲ್ಲಿ 25,196, ಉತ್ತರ ಕನ್ನಡದಲ್ಲಿ 29,265 ಹಾಗೂ ಕೊಡಗು ಜಿಲ್ಲೆ ಯಲ್ಲಿ 31,830 ಮಂದಿಯ ಪರೀಕ್ಷೆ ನಡೆಯುತ್ತಿದೆ. ವಿಜಯಪುರದಲ್ಲಿ ಅತೀ ಕಡಿಮೆ 7,514 ಪರೀಕ್ಷೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News