ನೀಟ್ ವಿದ್ಯಾರ್ಥಿಗಳಿಗೆ ಬೆದರಿಕೆಯಾಗಿದೆ, ಶಿಕ್ಷಣ ರಾಜ್ಯದ ಜವಾಬ್ದಾರಿಯಾಗಿರಬೇಕು: ತಮಿಳು ನಟ ಸೂರ್ಯ

Update: 2021-06-19 17:11 GMT
photo: twitter

ಚೆನ್ನೈ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ವಿದ್ಯಾರ್ಥಿಗಳಿಗೆ ಬೆದರಿಕೆಯಾಗಿದೆ. ಶಿಕ್ಷಣವು ರಾಜ್ಯದ ಜವಾಬ್ದಾರಿ ಮತ್ತು ಹಕ್ಕಾಗಿರಬೇಕು ಎಂದು ತಮಿಳು ನಟ ಸೂರ್ಯ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ಹಾಗೂ ತಮಿಳುನಾಡಿನ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರ ಭವಿಷ್ಯವನ್ನು ನೀಟ್ ಹಾಳು ಮಾಡುತ್ತಿದೆ. ಸಾಮಾನ್ಯ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಸೂರ್ಯ ಆಗ್ರಹಿಸಿದರು.

ವೈದ್ಯಕೀಯ ಪ್ರವೇಶದಲ್ಲಿ ನೀಟ್‌ನ ಪ್ರಭಾವವನ್ನು ಅಧ್ಯಯನ ಮಾಡುವ ತಮಿಳುನಾಡು ಸರಕಾರದ ಕ್ರಮವನ್ನು ಬೆಂಬಲಿಸಿದ ನಟ ತಮ್ಮ ಅಗಾರಂ ಪ್ರತಿಷ್ಠಾನದ ಪರವಾಗಿ ಹೇಳಿಕೆ ಬಿಡುಗಡೆ ಮಾಡಿದರು.

ಪ್ರತಿಷ್ಠಾನವು ಪತ್ರವನ್ನು ಸಮಿತಿಗೆ ಸಲ್ಲಿಸಿದೆ ಎಂದು ಅವರು ದೃಢಪಡಿಸಿದರು. ಜೂನ್ 23 ರ ಮೊದಲು ನೀಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಸೂರ್ಯ ಸಾರ್ವಜನಿಕರನ್ನು ಕೋರಿದರು.

 “ನಾವು ಸರಕಾರವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ  ನೀಟ್ ನಂತಹ ಪರೀಕ್ಷೆಗಳಲ್ಲಿನ ಕಳವಳಗಳ ಬಗ್ಗೆ ಬದಲಾವಣೆ ಮಾಡುವವರಿಗೆ ತಿಳಿಸಬೇಕು. ಇಲ್ಲದಿದ್ದರೆ ಅಂತಹ 'ಸಾಮಾನ್ಯ' ಪರೀಕ್ಷೆಗಳು ನಮ್ಮ ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತವೆ’’ ಎಂದು ಸೂರ್ಯ ಹೇಳಿದರು.

 “ಭಾಷೆ ಹಾಗೂ  ಸಂಸ್ಕೃತಿಯಲ್ಲಿ ವೈವಿಧ್ಯಮಯವಾಗಿರುವ ಭಾರತದಂತಹ ದೇಶಕ್ಕೆ ಶಿಕ್ಷಣ ವ್ಯವಸ್ಥೆಯು ಅದರ ರಾಜ್ಯದ ಕೈಯಲ್ಲಿದ್ದರೆ ಮಾತ್ರ ಅದು ನ್ಯಾಯೋಚಿತವಾಗಿರುತ್ತದೆ. ಇದರ ಮೂಲಕ ನಾವು ಶಾಶ್ವತ ಪರಿಹಾರವನ್ನು ಕಾಣಬಹುದು. ಎಲ್ಲಾ ರಾಜ್ಯದ ರಾಜಕೀಯ ಪಕ್ಷಗಳು ಒಗ್ಗೂಡಿ ಶಿಕ್ಷಣವನ್ನು ರಾಜ್ಯದ ಜವಾಬ್ದಾರಿ ಹಾಗೂ  ಹಕ್ಕನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ನಾನು ವಿನಂತಿಸುತ್ತೇನೆ ”ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News