ದುರ್ಬಲ ಮಹಿಳೆಯರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಿ: ದ.ಕ. ಜಿಲ್ಲಾಧಿಕಾರಿ

Update: 2021-06-19 17:06 GMT

ಮಂಗಳೂರು, ಜೂ.19: ಜಿಲ್ಲೆಯ ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು ಹಾಗೂ ಎಚ್‌ಐವಿ ಸೋಂಕಿತ ಮಹಿಳೆಯರಿಗೆ ಸರಕಾರದಿಂದ ನೀಡುವ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದರು.

ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು ಹಾಗೂ ಎಚ್‌ಐವಿ ಸೋಂಕಿತ ಮಹಿಳೆಯರ ಪಡಿತರ ಹಾಗೂ ಕೋವಿಡ್-19 ಲಸಿಕೆ ಒದಗಿಸುವ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸರಕಾರ ಮಹಿಳೆಯರ ಕಲ್ಯಾಣ ಅಭಿವೃದ್ಧಿಗೆ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳ ಬಗ್ಗೆ ಮಾಹಿತಿ ನೀಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯ 134 ಲಿಂಗತ್ವ ಅಲ್ಪಸಂಖ್ಯಾತರ ನೋಂದಣಿಯಾಗಿದೆ. ಅವರಲ್ಲಿ 125 ಮಂದಿಗೆ ಪಡಿತರ ಚೀಟಿ ನೀಡಲಾಗಿದೆ. ಉಳಿದಿರುವ 9 ಮಂದಿಗೆ ಯಾವುದೇ ಸಮಸ್ಯೆಯಾಗದಂತೆ ಪಡಿತರ ಚೀಟಿ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಡಿಸಿ ಸೂಚಿಸಿದರು.

920 ನೋಂದಾಯಿತ ದಮನಿತ ಮಹಿಳೆಯರ ಪೈಕಿ ಈಗಾಗಲೇ 901 ಮಹಿಳೆಯರು ಪಡಿತರ ಚೀಟಿ ಹೊಂದಿದ್ದಾರೆ. ಉಳಿದ 19 ಮಂದಿಗೆ ಶೀಘ್ರದಲ್ಲಿಯೇ ಪಡಿತರ ಚೀಟಿ ನೀಡಬೇಕು. ಲಾಕ್‌ಡೌನ್ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 4515 ಮಂದಿ ಎಚ್‌ಐವಿ ಸೋಂಕಿತ ಮಹಿಳೆಯರನ್ನು ಗುರುತಿಸಲಾಗಿದೆ. 4369 ಮಹಿಳೆಯರಿಗೆ ಈಗಾಗಲೇ ಪಡಿತರ ಚೀಟಿ ನೀಡಲಾಗಿದೆ. ಇನ್ನುಳಿದ 146 ಮಂದಿ ಎಚ್‌ಐವಿ ಸೋಂಕಿತರು ಪಡಿತರ ಚೀಟಿ ಹೊಂದಿರುವುದಿಲ್ಲ. ಇವರಲ್ಲಿ ಅರ್ಹತೆ ಹೊಂದಿರುವವರಿಗೆ ಸಹ ಪಡಿತರ ಚೀಟಿ ವಿತರಿಸಬೇಕು ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಆಡಿಷನಲ್ ಎಸ್ಪಿ ಭಾಸ್ಕರ್, ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸದಾಶಿವ ಶಾನ್‌ಭೋಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News