ಕೆನ್ನತ್ ಕೌಂಡಾ ಆಫ್ರಿಕಾದ ಸ್ವಾತಂತ್ರ್ಯ ಏಕತೆಯ ಪಿತಾಮಹ: ದ.ಆಫ್ರಿಕಾ ಅಧ್ಯಕ್ಷರ ಬಣ್ಣನೆ

Update: 2021-06-19 17:55 GMT

ಲುಸಾಕಾ, ಜೂ.19: ಗುರುವಾರ ನಿಧನರಾದ ಜಾಂಬಿಯಾ ದೇಶದ ಸ್ಥಾಪಕ ಅಧ್ಯಕ್ಷ ಕೆನ್ನತ್ ಕೌಂಡಾ ಆಫ್ರಿಕನ್ ದೇಶಗಳ ಸ್ವಾತಂತ್ರ್ಯ ಮತ್ತು ಏಕತೆಯ ಪಿತಾಮಹ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸಾ ಹೇಳಿದ್ದಾರೆ. ಆಫ್ರಿಕಾಖಂಡದ ಹಲವು ದೇಶಗಳಲ್ಲಿನ ಮೂಲನಿವಾಸಿಗಳು ವಸಾಹತುಶಾಹಿಗಳ ದಬ್ಬಾಳಿಕೆಗೆ ಅಂಜಿ ದೇಶತೊರೆದಾಗ ಕೌಂಡಾ ನಾಯಕತ್ವದಡಿ ಝಿಂಬಾಬ್ವೆ ಆಶ್ರಯ ನೀಡಿದೆ. ಅಲ್ಲದೆ ವಿಮೋಚನಾ ಹೋರಾಟಗಾರರಿಗೆ ಬೆಂಬಲ ನೀಡಿದೆ. 

ದಕ್ಷಿಣ ಆಫ್ರಿಕಾಕ್ಕೆ ಅತೀ ಅಗತ್ಯದ ಸಂದರ್ಭದಲ್ಲಿ ಅವರು ದೇಶದ ಜನತೆಯ ಪರ ನಿಂತರು ಮತ್ತು ನಮ್ಮ ಜನರ ಸ್ವಾತಂತ್ರ್ಯ ಹೋರಾಟವನ್ನು ನಿರಂತರ ಬೆಂಬಲಿಸಿದರು. ಅವರ ಋಣ ಸಂದಾಯ ಮಾಡಲು ಸಾಧ್ಯವಿಲ್ಲ ಎಂದು ರಮಫೋಸಾ ಹೇಳಿದ್ದಾರೆ. ಕೌಂಡಾರಿಗೆ ಗೌರವ ಸೂಚಿಸುವ ಸಲುವಾಗಿ ಆಫ್ರಿಕಾ ಖಂಡದ ಹಲವು ದೇಶಗಳು ಆಯಾ ದೇಶದಲ್ಲಿ ಕೆಲವು ದಿನಗಳ ಶೋಕಾಚರಣೆ ಘೋಷಿಸಿವೆ. 

97 ವರ್ಷದ ಕೌಂಡಾ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಆಫ್ರಿಕಾ ಖಂಡದಾದ್ಯಂತ ನಡೆದ ಹಲವು ಚಳವಳಿಗಳಿಗೆ ಬೆಂಬಲ ನೀಡಿದ್ದರು. ಅಂಗೋಲಾ, ಮೊಝಾಂಬಿಕ್, ನಮೀಬಿಯಾ, ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮುಂತಾದ ಆಫ್ರಿಕಾ ಖಂಡದ ದೇಶಗಳಲ್ಲಿ ಅಲ್ಪಸಂಖ್ಯಾತ ಬಿಳಿಜನರ ಆಡಳಿತದಲ್ಲಿ ಬಹುಸಂಖ್ಯಾತ ಕಪ್ಪುವರ್ಣೀಯರು ಅನುಭವಿಸುತ್ತಿದ್ದ ತಾರತಮ್ಯ, ಅಸಮಾನತೆಯ ವಿರುದ್ಧ ನಡೆದಿದ್ದ ಚಳವಳಿಗಳು ಹಾಗೂ ಈ ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿ ಹಲವು ಅಭಿಯಾನಗಳನ್ನು ಆರಂಭಿಸಿದ್ದರು. 

ನಮ್ಮ ಪ್ರದೇಶವನ್ನು ವಸಾಹತುಶಾಹಿಗಳಿಂದ ಮುಕ್ತವಾಗಿಸಿದ ಉದಾರ ಮನಸ್ಸಿನ, ಸುಶೀಲ ದೃಢಸಂಕಲ್ಪದ ಮಹಾನ್ ವ್ಯಕ್ತಿಯೊಬ್ಬರನ್ನು ಆಫ್ರಿಕಾ ಕಳೆದುಕೊಂಡಿದೆ ಎಂದು ನಮೀಬಿಯಾದ ಅಧ್ಯಕ್ಷ ಹೇಗ್ ಗೆಯ್ನಿಗೋಬ್ ಟ್ವೀಟ್ ಮಾಡಿದ್ದಾರೆ. ಕೌಂಡಾ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ದಕ್ಷಿಣ ಆಫ್ರಿಕಾ 10 ದಿನಗಳ ಶೋಕಾಚರಣೆ ಘೋಷಿಸಿದ್ದರೆ, ಬೊಟ್ಸ್ವಾನಾ, ನಮೀಬಿಯಾ ಮತ್ತು ತಾಂಝಾನಿಯಾದಲ್ಲಿ 7 ದಿನ, ಝಿಂಬಾಬ್ವೆಯಲ್ಲಿ 3 ದಿನ ಶೋಕಾಚರಣೆ ಘೋಷಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News