ಕೋವಿಡ್ 3ನೇ ಅಲೆ 6-8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಎಐಐಎಂಎಸ್ ನಿರ್ದೇಶಕ

Update: 2021-06-19 19:05 GMT

ಹೊಸದಿಲ್ಲಿ: ಸಾಮಾನ್ಯವಾಗಿ ಸೋಂಕಿನ ೩ನೇ ಅಲೆ ಸುಮಾರು ೩ ತಿಂಗಳ ಬಳಿಕ ಅಪ್ಪಳಿಸುತ್ತದೆ. ಆದರೆ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಭಾರತದಲ್ಲಿ ಕೋವಿಡ್-19 ಸೋಂಕಿನ ಕುರಿತ ಮುನ್ನೆಚ್ಚರಿಕೆಯ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಜನರು ಇದೇ ರೀತಿ ಗುಂಪುಗೂಡುವುದನ್ನು ಮುಂದುವರಿಸಿದರೆ ಸೋಂಕಿನ 3ನೇ ಅಲೆ ಮುಂದಿನ 6-8 ವಾರದಲ್ಲಿ ದೇಶಕ್ಕೆ ಅಪ್ಪಳಿಸುವುದನ್ನು ತಪ್ಪಿಸಲಾಗದು  ಎಂದು ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಎಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.

ಸೋಂಕಿನ 2 ಮತ್ತು ಮೂರನೇ ಅಲೆಯು ಇಷ್ಟೆಲ್ಲಾ ಅನಾಹುತ, ತೊಂದರೆ ತಂದಿಟ್ಟರೂ ಜನರು ಇನ್ನೂ ಪಾಠ ಕಲಿತಂತಿಲ್ಲ. ಒಂದೊಮ್ಮೆ ದೈನಂದಿನ 4 ಲಕ್ಷ ಸೋಂಕಿನ ಪ್ರಕರಣದೊಂದಿಗೆ ಆತಂಕ ಮೂಡಿಸಿದ್ದ ಸೋಂಕಿನ 2ನೇ ಅಲೆ ಈಗ ನಿಧಾನಕ್ಕೆ ಕ್ಷೀಣಿಸುತ್ತಿದ್ದರೂ ಈ ಹೊಡೆತದಿಂದ ದೇಶ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಈ ಮಧ್ಯೆ, ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆಯೇ ಜನ ಮತ್ತೆ ಗುಂಪುಗೂಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸೋಂಕಿನ ಪ್ರಕರಣ ಹೆಚ್ಚಲು ಕೆಲ ಕಾಲ ಹಿಡಿಯಬಹುದು. ಆದರೆ ಕೋವಿಡ್ ಸಂಬಧಿತ ಮುನ್ನೆಚ್ಚರಿಕೆ, ಶಿಷ್ಟಾಚಾರ, ನಿಯಮಾವಳಿ ಪಾಲಿಸದಿದ್ದರೆ ಹೆಚ್ಚೆಂದರೆ 8 ವಾರದ ಅಂತರದಲ್ಲಿ ಮತ್ತೊಂದು ಗಂಡಾಂತರ ಸಂಭವಿಸಬಹುದು ಎಂದವರು ಹೇಳಿದ್ದಾರೆ.

ಅನ್ಲಾಕಿಂಗ್ ಪ್ರಕ್ರಿಯೆ ಸಂದರ್ಭ ಮನುಷ್ಯರ ನಡವಳಿಕೆ ಬಗ್ಗೆ ಗಮನಿಸಬೇಕು. ಹಂತಹಂತವಾಗಿ ಅನ್ಲಾಕ್ ನಡೆಸಬೇಕು. 5%  ಪೊಸಿಟಿವ್ ದರಕ್ಕಿಂತ ಅಧಿಕ ಇರುವ ಜಿಲ್ಲೆಗಳು ಮಿನಿ ಲಾಕ್ಡೌನ್ ವಿಧಿಸಬೇಕು. ಕೊರೋನ ಹಾಟ್ಸ್ಪಾಟ್ಗಳಲ್ಲಿ `ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ' ಪ್ರಕ್ರಿಯೆ ಪಾಲಿಸುವ ಅಗತ್ಯವಿದೆ. ಜೊತೆಗೆ ಕೊರೋನ ಶಿಷ್ಟಾಚಾರ ಪಾಲಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಕಠಿಣ ನಿಗಾ ವಹಿಸಬೇಕಿದೆ. ಕೊರೋನ ಸೋಂಕು ತ್ವರಿತವಾಗಿ ಪರಿವರ್ತನೆಗೊಳ್ಳುತ್ತಿದೆ. ಪ್ರಥಮ ಅಲೆಯ ಸಂದರ್ಭ ಸೋಂಕು ನಿಧಾನವಾಗಿ ಹರಡುತ್ತಿತ್ತು, ಆದರೆ 2ನೇ ಅಲೆಯಲ್ಲಿ ಕ್ಷಿಪ್ರವಾಗಿ ಹರಡಿದೆ. ಮೂರನೇ ಅಲೆ ಇನ್ನಷ್ಟು ವಿನಾಶಕಾರಿಯಾಗಿದ್ದು ಕ್ಷಿಪ್ರವಾಗಿ ಹರಡಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News