ಬಿಹಾರದಲ್ಲಿ ಲೆಕ್ಕಕ್ಕೆ ಸಿಗದ ಕೋವಿಡ್ ಸಾವುಗಳೆಷ್ಟು ಗೊತ್ತೇ?

Update: 2021-06-20 04:32 GMT

ಹೊಸದಿಲ್ಲಿ, ಜೂ.20: ಬಿಹಾರದಲ್ಲಿ 2021ರ ಮೊದಲ ಐದು ತಿಂಗಳಲ್ಲಿ 75 ಸಾವಿರ ಮಂದಿ 'ವಿವರಿಸಲಾಗದ ಕಾರಣ'ದಿಂದ ಮೃತಪಟ್ಟಿದ್ದಾರೆ ಎಂಬ ಅಂಶ ಇದೀಗ ಬಹಿರಂಗವಾಗಿದೆ. ಮಾರಕ ಕೋವಿಡ್-19 ಸಾಂಕ್ರಾಮಿಕದ ಅಲೆಯ ಅಟ್ಟಹಾಸದ ನಡುವೆ ಸರ್ಕಾರದ ಈ ಅಂಕಿಅಂಶಗಳು ಬೆಚ್ಚಿ ಬೀಳಿಸಿವೆ. ಇದು ರಾಜ್ಯ ಸರ್ಕಾರ ಘೋಷಿಸಿರುವ ಕೋವಿಡ್-19 ಸೋಂಕಿತರ ಸಾವಿರ ಸಂಖ್ಯೆಯ ಹತ್ತು ಪಟ್ಟು. ಸರ್ಕಾರ ಕೋವಿಡ್ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಿದೆ ಎನ್ನುವ ಅನುಮಾನ ಇದರಿಂದ ದಟ್ಟವಾಗುತ್ತದೆ ಎಂದು www.ndtv.com ವರದಿ ಮಾಡಿದೆ.

2019ರಲ್ಲಿ ಜನವರಿ- ಮೇ ತಿಂಗಳ ಅವಧಿಯಲ್ಲಿ ಬಿಹಾರದಲ್ಲಿ 1.3 ಲಕ್ಷ ಸಾವು ಸಂಭವಿಸಿತ್ತು. ಆದರೆ ಇದೇ ಅವಧಿಯಲ್ಲಿ 2021ರಲ್ಲಿ 2.2 ಲಕ್ಷ ಸಾವು ಸಂಭವಿಸಿದೆ ಎಂದು ರಾಜ್ಯದ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಮ್‌ನ ಅಂಕಿಅಂಶಗಳು ಹೇಳುತ್ತವೆ. ಅಂದರೆ 82,500 ಹೆಚ್ಚು ಮಂದಿ ಈ ವರ್ಷ ಮೃತಪಟ್ಟಿದ್ದಾರೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಸಾವುಗಳು ಅಂದರೆ ಶೇಕಡ 62ರಷ್ಟು ಸಾವು ಈ ವರ್ಷದ ಮೇ ತಿಂಗಳಲ್ಲಿ ಸಂಭವಿಸಿದೆ.

ಬಿಹಾರ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಜನವರಿಯಿಂದ ಮೇ ವರೆಗೆ ಕೋವಿಡ್‌ನಿಂದ ಮೃತಪಟ್ಟಿರುವವರು 7,717. ಇದು ಕೂಡಾ ಸರ್ಕಾರ 3,951 ಹಳೆಯ ಸಾವಿನ ಲೆಕ್ಕವನ್ನು ಇತ್ತೀಚೆಗೆ ಸೇರಿಸಿದ ಬಳಿಕ ಆಗಿರುವ ಒಟ್ಟು ಸಂಖ್ಯೆ. ಈ ಸಾವುಗಳು ಯಾವಾಗ ಸಂಭವಿಸಿದೆ ಎಂದು ಅಧಿಕಾರಿಗಳು ಪ್ರಕಟಿಸಿಲ್ಲವಾದರೂ, ಈ ಸಾವುಗಳು 2021ರಲ್ಲಿ ಸಂಭವಿಸಿವೆ ಎಂದು ದಾಖಲಿಸಲಾಗಿದೆ.

ಇಷ್ಟಾಗಿಯೂ ಒಟ್ಟಾರೆ ಕೋವಿಡ್ ಸಾವಿನ ಅಧಿಕೃತ ಸಂಖ್ಯೆಗೂ ಸಿವಿಲ್ ರಿಜಿಸ್ಟ್ರೇಷನ್ ಸಿಸ್ಟಂನಲ್ಲಿ ದಾಖಲಾಗಿರುವ ಹೆಚ್ಚುವರಿ ಸಾವಿನ ಸಂಖ್ಯೆಗೂ 74,808 ವ್ಯತ್ಯಾಸ ಕಂಡುಬಂದಿದೆ. ಅಂಕಿಅಂಶಗಳನ್ನು ಪರಿಷ್ಕರಿಸಿದ ಬಳಿಕ ಇನ್ನೂ ಲೆಕ್ಕ ಪ್ರಕಟಿಸದ ಕೋವಿಡ್ ಸಾವುಗಳು ರಾಜ್ಯದಲ್ಲಿ ಇವೆಯೇ ಎನ್ನುವ ಪ್ರಶ್ನೆಯನ್ನು ಇದು ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News