ಪ್ರಧಾನಿ ವಿರುದ್ಧದ ಆರೋಪ ತನಿಖೆಗೆ ಒಪ್ಪಿಗೆ ನೀಡುವವರು ಯಾರು?

Update: 2021-06-20 04:44 GMT

ಹೊಸದಿಲ್ಲಿ, ಜೂ.20: ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪಗಳು ಬಂದಾಗ ಚಾರ್ಜ್‌ಶೀಟ್ ಸಲ್ಲಿಸಲು ಸ್ಪೀಕರ್ ಒಪ್ಪಿಗೆ ನೀಡಬೇಕೇ ಅಥವಾ ಲೋಕಪಾಲರು ಒಪ್ಪಿಗೆ ನೀಡಬೇಕೇ ಎಂಬ ಬಗ್ಗೆ ಲೋಕಸಭೆ ತಜ್ಞರ ಅಭಿಪ್ರಾಯ ಕೋರಿದೆ.

ಸಂಸದರ ವಿರುದ್ಧದ ಆಪಾದನೆಗಳ ತನಿಖೆಗೆ ಅನುಮತಿ ಮಂಜೂರು ಮಾಡುವ ವಿಚಾರದಲ್ಲಿ ಹಾಲಿ ಇರುವ ವ್ಯವಸ್ಥೆಯನ್ನು ಇದು ಬದಲಿಸಬಹುದಾದ ಕ್ರಮ ಎಂದು ಹೇಳಲಾಗಿದೆ. ಈ ಬೆಳವಣಿಗೆಯನ್ನು ದೃಢಪಡಿಸಿರುವ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಇದು ತೀರಾ ಸಂಕೀರ್ಣ ವಿಷಯ ಎಂದು ಹೇಳಿದ್ದಾರೆ.

ನಾರದ- ಶಾರದಾ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಕೆಲ ಸಂಸದರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸುವ ಅನುಮತಿ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿರುವ ಮನವಿಗಳು ಬಾಕಿ ಇರುವುದು ಇತ್ತೀಚೆಗೆ ಸುದ್ದಿಯಾಗಿತ್ತು. ಈ ಪೈಕಿ ಮೂವರು ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಸಂಸದರು ಹಾಗೂ ಮತ್ತೊಬ್ಬರು ಟಿಎಂಸಿಯ ಮಾಜಿ ಸಂಸದ ಹಾಗೂ ಹಾಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ.

ಸಿಬಿಐ ಈ ಹಿಂದೆ ಮನವಿ ಬಗ್ಗೆ ನೆನಪೋಲೆಗಳನ್ನೂ ಕಳುಹಿಸಿತ್ತು. ಸುಪ್ರೀಂಕೋರ್ಟ್ ನಿಗದಿಪಡಿಸಿರುವ ರೂಢಿಯ ಪ್ರಕಾರ, ಸಂಸದರ ವಿರುದ್ಧ ಕಾನೂನು ಕ್ರಮಕ್ಕೆ ಲೋಕಸಭೆಯ ಸ್ಪೀಕರ್ ಅವರ ಅನುಮತಿ ಬೇಕು. ಮೇಲ್ಮನೆ ಸದಸ್ಯರ ವಿರುದ್ಧದ ತನಿಖೆಗೆ ರಾಜ್ಯಸಭೆ ಸಭಾಪತಿಯ ಒಪ್ಪಿಗೆ ಅಗತ್ಯ. ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳು ಭ್ರಷ್ಟಾಚಾರ ಕಾಯ್ದೆ ತಡೆ ವ್ಯಾಪ್ತಿಯಲ್ಲಿ ಬರುತ್ತವೆ. ಇದರ ಪ್ರಕಾರ ಸಾರ್ವಜನಿಕ ಸೇವಕರ ವಿರುದ್ಧದ ತನಿಖೆಗೆ ನೇಮಕಾತಿ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿದೆ.

ಆದರೆ ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್ ಲೋಕಪಾಲರ ನೇಮಕಾತಿ ಕಾರಣದಿಂದ ಸಂಸದೀಯ ಅಧಿಕಾರಿಗಳಲ್ಲಿ ಈ ಜಿಜ್ಞಾಸೆ ಮೂಡಿದೆ. ಈಗಾಗಲೇ ಈ ಬಗ್ಗೆ ಇಬ್ಬರು ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ಆದರೆ ಇಬ್ಬರೂ ಬೇರೆ ಬೇರೆ ಅಭಿಪ್ರಾಯಗಳನ್ನು ನೀಡಿದ್ದಾರೆ. ಆದ್ದರಿಂದ ಈ ವಿಷಯವನ್ನು ಅಧ್ಯಯನ ಮಾಡಲು ತಜ್ಞರನ್ನು ಕೋರಲಾಗಿದೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News