ಶಾಸಕರ ಪುತ್ರರಿಗೆ ಸರಕಾರಿ ಉದ್ಯೋಗ ನೀಡುವ ಪಂಜಾಬ್ ಸರಕಾರದ ನಿರ್ಧಾರ ಟೀಕಿಸಿದ ಸಿಧು ಪತ್ನಿ

Update: 2021-06-20 06:13 GMT
photo: twitter

ಪಟಿಯಾಲ (ಪಂಜಾಬ್): ಆಡಳಿತ ಪಕ್ಷದ ಇಬ್ಬರು ಶಾಸಕರ ಪುತ್ರರಿಗೆ ಸರಕಾರಿ ಉದ್ಯೋಗಗಳನ್ನು ನೀಡುವ ಪಂಜಾಬ್ ಸರಕಾರದ ನಿರ್ಧಾರವನ್ನು ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಶನಿವಾರ ಟೀಕಿಸಿದ್ದಾರೆ. ಅರ್ಹತೆ ಮಾತ್ರ ಮಾನದಂಡವಾಗಿರಬೇಕು ಎಂದು ಹೇಳಿದ್ದಾರೆ.

ಇಬ್ಬರು ಕಾಂಗ್ರೆಸ್ ಶಾಸಕರ ಪುತ್ರರನ್ನು ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ  ನಾಯಬ್ ತಹಶೀಲ್ದಾರ್ ಆಗಿ  "ವಿಶೇಷ ಪ್ರಕರಣ"ದ ಆಧಾರದಲ್ಲಿ ನೇಮಿಸಲು ಪಂಜಾಬ್ ಸರಕಾರ ನಿರ್ಧರಿಸಿದ ಒಂದು ದಿನದ ನಂತರ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪತ್ನಿ ಈ ಹೇಳಿಕೆ ನೀಡಿದ್ದಾರೆ.

ಇಬ್ಬರು ಕಾಂಗ್ರೆಸ್ ಶಾಸಕರಾದ ಫತೇಹ್ ಜಂಗ್ ಸಿಂಗ್ ಬಾಜ್ವಾ ಹಾಗೂ  ರಾಕೇಶ್ ಪಾಂಡೆ ಅವರ ಪುತ್ರರನ್ನು ಅನುಕಂಪದ ಆಧಾರದಲ್ಲಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗೆ ನೇಮಿಸುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಅರ್ಜುನ್ ಪ್ರತಾಪ್ ಸಿಂಗ್ ಬಜ್ವಾ ಅವರನ್ನು ಪಂಜಾಬ್ ಪೊಲೀಸ್  ಇನ್ಸ್‌ಪೆಕ್ಟರ್ ಆಗಿ ಹಾಗೂ  ಭೀಷಂ ಪಾಂಡೆ ಅವರನ್ನು ರಾಜ್ಯದ ಕಂದಾಯ ಇಲಾಖೆಯಲ್ಲಿ ನಾಯಬ್ ತಹಶೀಲ್ದಾರ್ ಆಗಿ ನೇಮಿಸಲಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ನವಜೋತ್ ಕೌರ್ ಸಿಧು, ಅರ್ಹತೆ ಇಲ್ಲದೆ ಯಾರಿಗೂ ಯಾವುದೇ ಹುದ್ದೆಯನ್ನು ನೀಡಬಾರದು, ವಿಶೇಷವಾಗಿ ಈಗಾಗಲೇ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದವರಿಗೆ ನೀಡಲೇಬಾರದು. ಇವರ ಬದಲಿಗೆ ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುವಿಗೆ ಉದ್ಯೋಗ ನೀಡಬಹುದಿತ್ತು ಎಂದು ನವಜೋತ್ ಕೌರ್  ಹೇಳಿದ್ದಾರೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News