ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಏಕಕಾಲದಲ್ಲಿ 4 ಮದುವೆ: ಎ.ಸಿ. ದಾಳಿ

Update: 2021-06-20 11:30 GMT

ಮಂಗಳೂರು, ಜೂ.20: ನಗರದ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿರುವ ವೇದಿಕೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಕಾರ್ಪೊರೇಟರ್ ರ ಮಗಳದ್ದು ಸೇರಿದಂತೆ ಏಏಕಕಾಲದಲ್ಲಿ ನಾಲ್ಕು ಮದುವೆ ನಡೆಸುತ್ತಿದ್ದ ಸಂದರ್ಭ ಎಸಿ ಮದನ್ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿ, ಕೇಸು ದಾಖಲಿಸಿದೆ.

ನಿಯಮಬಾಹಿರವಾಗಿ ಮದುವೆ ಸಮಾರಂಭ ಆಯೋಜಿಸಿರುವುದಾಗಿ ಬಂದ ದೂರಿನ ಹಿನ್ನೆಲೆ ಈ ದಾಳಿ ನಡೆದಿದೆ. ಬಿಜೆಪಿಯ ನಾಮನಿರ್ದೇಶಿತ ಕಾರ್ಪೊರೇಟರ್ ಭಾಸ್ಕರ್ ಚಂದ್ರ ಅವರ ಪುತ್ರಿಯ ಮದುವೆ ಸೇರಿದಂತೆ ಇನ್ನೂ ಮೂರು ವಿವಾಹಗಳು ನಡೆಯುತ್ತಿದ್ದವೆನ್ನಲಾಗಿದೆ. ಮದುವೆ ನೂರಕ್ಕೂ ಹೆಚ್ಚು ಜನರ ಗುಂಪುಗೂಡಿದ್ದರು ಎಂದು ತಿಳಿದುಬಂದಿದೆ.

‘ಮಂಗಳಾದೇವಿ ದೇವಸ್ಥಾನದ ಸಮೀಪ ಕೋವಿಡ್ ನಿಯಮ ಉಲ್ಲಂಘಿಸಿ ದೇವಸ್ಥಾನ ಮಂಡಳಿಯು ಏಕಕಾಲದಲ್ಲಿ ನಾಲ್ಕು ಮದುವೆಗಳಿಗೆ ಅವಕಾಶ ನೀಡಿದೆ. ಮದುವೆ ನಡೆಯಲು ಅನುಮತಿ ನೀಡಿದವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ವಿವರವಾದ ವರದಿ ಪಡೆಯಲಾಗುವುದು’ ಎಂದು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯಿಂದ ಮದುವೆಗೆ ಅನುಮತಿ ನೀಡಿರುವ ಕುರಿತ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿದ ಎಸಿ ಮದನ್ ಮೋಹನ್, ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಮಾನಾಥ ಹೆಗಡೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾಲ್ಕು ಮದುವೆ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ನೀಡಿದ್ದೀರಿ? ಯಾವ ಸಮಯ? ಎಷ್ಟು ಜನರಿಗೆ ಅವಕಾಶ ನೀಡಲಾಗಿದೆ ಎಂದೂ ಪ್ರಶ್ನಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೊರೋನ ತಾಂಡವವಾಡುತ್ತಿದೆ. ಸೋಂಕು ಪ್ರಕರಣ ಏರಿಕೆಯಲ್ಲಿರುವ ಸಂದರ್ಭ ಮದುವೆಗಳಿಗೆ ಅನುಮತಿ ನೀಡಿದ್ದಕ್ಕೆ ಕೆಂಡಾಮಂಡಲರಾದರು.

ಮಂಗಳೂರು ಮಹಾನಗರ ಪಾಲಿಕೆಯಿಂದ ನಾಲ್ಕು ಮದುವೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕೇಸು ದಾಖಲಿಸುವಂತೆ ಎಸಿ ಸೂಚಿಸಿದ್ದಾರೆ.

ದಾಳಿ ಸಂದರ್ಭ ಮನಪಾ ಉಪ ಆಯುಕ್ತರಾದ ಬಿನೊಯ್, ಧಾರ್ಮಿಕ ದತ್ತಿ ಇಲಾಖೆಯ ಸಣ್ಣ ರಂಗಯ್ಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News