ಹಾಜಿಪುರದಿಂದ 'ಆಶೀರ್ವಾದ್ ಯಾತ್ರೆ' ಆರಂಭಿಸಲು ಚಿರಾಗ್ ಪಾಸ್ವಾನ್ ನಿರ್ಧಾರ

Update: 2021-06-20 10:29 GMT

ಹೊಸದಿಲ್ಲಿ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಸ್ಥಾನವನ್ನು ಮರಳಿ ಪಡೆಯಲು  ಜನ ಬೆಂಬಲವನ್ನು ಕ್ರೋಡೀಕರಿಸುವ ಪ್ರಯತ್ನದಲ್ಲಿರುವ ಚಿರಾಗ್ ಪಾಸ್ವಾನ್  ತಮ್ಮ ತಂದೆ ಹಾಗೂ  ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರು ಬಿಹಾರದಲ್ಲಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಹಾಜಿಪುರದಿಂದ 'ಆಶೀರ್ವಾದ್ ಯಾತ್ರೆ' ಆರಂಭಿಸುವುದಾಗಿ ರವಿವಾರ ಘೋಷಿಸಿದ್ದಾರೆ. ಜುಲೈ 5 ರಿಂದ ಯಾತ್ರೆ ಪ್ರಾರಂಭವಾಗಲಿದೆ.

"ನನ್ನ ಸ್ವಂತ ಜನರು ನನ್ನನ್ನು ತೊರೆದಿದ್ದಾರೆ. ನಾನು ಜುಲೈ 5 ರಂದು ಹಾಜಿಪುರದಿಂದ ಪಾದಯಾತ್ರೆಯಲ್ಲಿ ಹೊರಡುತ್ತೇನೆ. ನಾವು ಇದನ್ನು ಎರಡು ತಿಂಗಳು ಮಾಡುತ್ತೇವೆ. ನಾವು ಜುಲೈ 5 ರಂದು ನನ್ನ ತಂದೆಯ ಜನ್ಮದಿನವನ್ನು ಆಚರಿಸುತ್ತೇವೆ" ಎಂದು ಚಿರಾಗ್ ಹೇಳಿದರು.

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ ಜೆಪಿ ಬಣವು ಪಕ್ಷದ ಸಂಸ್ಥಾಪಕರಿಗೆ ಭಾರತ್ ರತ್ನವನ್ನು ನೀಡುವಂತೆ ಒತ್ತಾಯಿಸಿತು. "ನನ್ನ ಸ್ವಂತ ಕುಟುಂಬ ಸದಸ್ಯರು ನನ್ನನ್ನು ಮೂಲೆಗುಂಪು ಮಾಡಿದ್ದು,  ಇದು ಕುರುಕ್ಷೇತ್ರಕ್ಕಿಂತ ಕಡಿಮೆಯಿಲ್ಲ" ಎಂದು ಹೇಳಿದರು.

ತನ್ನ ತಾಯಿಯ ಆಶೀರ್ವಾದವನ್ನು ಬಯಸಿದ ಚಿರಾಗ್, "ಈಗ ನಾನು ನನ್ನ ತಾಯಿ ಹಾಗೂ  ಜನರ ಬೆಂಬಲದೊಂದಿಗೆ ಯಾರಿಗೂ ಹೆದರುವುದಿಲ್ಲ. ನಮ್ಮ ಬಾಗಿಲುಗಳು ಎಲ್ಲರಿಗೂ ಯಾವಾಗಲೂ ತೆರೆದಿರುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News