ದ.ಕ.ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ; ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಖರೀದಿಗೆ ಅವಕಾಶ: ಜಿಲ್ಲಾಧಿಕಾರಿ

Update: 2021-06-20 15:56 GMT

ಮಂಗಳೂರು, ಜೂ.20: ದ.ಕ.ಜಿಲ್ಲೆಯಲ್ಲಿ ಜೂ.21ರ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ರವಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಸದ್ಯ ಜುಲೈ 5ರವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಲಾಕ್‌ಡೌನ್ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರದಿಂದ ಪ್ರತಿ ದಿನ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ವಿಲ್ಲ. ಆದರೆ ರಿಕ್ಷಾ ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇವಲ ಇಬ್ಬರು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬಹುದಾಗಿದೆ.

ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಬೀದಿ ಬದಿ ವ್ಯಾಪಾರ, ದಿನಸಿ ಅಂಗಡಿ, ಮೀನು, ಮಾಂಸ, ತರಕಾರಿ, ಹಣ್ಣು ಹಂಪಲುಗಳ ಅಂಗಡಿ, ಡೈರಿ, ಹಾಲಿನ ಬೂತು, ಪಡಿತರ ಅಂಗಡಿಗಳನ್ನು ತೆರೆಯಬಹುದಾಗಿದೆ. ಅಲ್ಲದೆ ಪ್ರಾಣಿಗಳ ಮೇವುಗಳನ್ನು ಮಾರಾಟ ಮಾಡುಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಎಲ್ಲಾ ಉತ್ಪಾದಕ ಘಟಕಗಳು/ಕೈಗಾರಿಕೆಗಳು ಶೇ.50ರಷ್ಟು ಸಿಬ್ಬಂದಿಯನ್ನು ನಿಯುಕ್ತಿಗೊಳಿಸಿ ಕಾರ್ಯಾಚರಿಸಬಹುದು. ಆದರೆ ಉಡುಪು ತಯಾರಿಯಲ್ಲಿ ತೊಡಗಿರುವ ಘಟಕಗಳು, ಸಂಸ್ಥೆಗಳು, ಕೈಗಾರಿಕೆಗಳು ಶೇ.30ರಷ್ಟು ಸಿಬ್ಬಂದಿಯನ್ನು ಮಾತ್ರ ಬಳಸಬಹುದಾಗಿದೆ. ಸಿಮೆಂಟ್, ಸ್ಟೀಲ್ ಸಹಿತ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ವ್ಯಾಪಾರ ಮಾಡುವ ಅಂಗಡಿಗಳು/ಸಂಸ್ಥೆಗಳ ಸಹಿತ ಎಲ್ಲಾ ಕಟ್ಟಡ ನಿರ್ಮಾಣ ಚಟುವಟಿಕೆಗಳು/ದುರಸ್ತಿ ಕಾರ್ಯವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಈಗಾಗಲೆ ಕಾರ್ಯಾಚರಿಸುವ ಸರಕಾರಿ ಕಚೇರಿಯೊಂದಿಗೆ ಕೃಷಿ ಮತ್ತು ಸಂಬಂಧಿತ ಕಚೇರಿಗಳು, ಲೋಕೋಪಯೋಗಿ ಇಲಾಖೆ, ವಸತಿ ಇಲಾಖೆ, ಪ್ರಾದೇಶಿಕ ಸಾರಿಗೆ ಕಚೇರಿಗಳು, ಕೇಂದ್ರ ಸರಕಾರದ ಕಂದಾಯ ಇಲಾಖೆಯ ಕಚೇರಿಗಳನ್ನು ಶೇ.50ರಷ್ಟು ಸಿಬ್ಬಂದಿಯೊಂದಿಗೆ ತೆರಯಬಹುದಾಗಿದೆ.

ಘನತ್ಯಾಜ್ಯ ನಿರ್ವಹಣೆ ಸಹಿತ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ ತರಬೇತಿಯನ್ನು ತೆರೆಯಲು ಅನುಮತಿಸಲಾಗಿದೆ. ಕನ್ನಡಕದ ಅಂಗಡಿಗಳನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ತೆರೆಯಬಹುದಾಗಿದೆ. ಜಿಲ್ಲೆಯಲ್ಲಿ ಯಾವುದೇ ಪಾರ್ಕ್/ಉದ್ಯಾನವನವನ್ನು ತೆರೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ರಾತ್ರಿ ಕರ್ಫ್ಯೂ

ಅತ್ಯವಶ್ಯಕ ಚಟುವಟಿಕೆಗಳನ್ನು ಹೊರತುಪಡಿಸಿ ರಾತ್ರಿ ಕರ್ಫ್ಯೂ ಸಂದರ್ಭ ಅಂದರೆ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಜನಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ತುರ್ತು ಸಂದರ್ಭ ರೋಗಿಗಳು ಮತ್ತವರ ಪರಿಚಾರಕರು/ವ್ಯಕ್ತಿಗಳನ್ನು ಕರೆದೊಯ್ಯಲು ಅನುಮತಿಸಲಾಗಿದೆ. ರಾತ್ರಿ ಕಾರ್ಯಾಚರಣೆಗೆ ಅನುಮತಿಸಲಾದ ಕೈಗಾರಿಕೆಗಳು, ಕಂಪೆನಿಗಳಲ್ಲಿ ಕೆಲಸ ಮಾಡುವವರು ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು. ಟೆಲಿಕಾಂ/ಇಂಟರ್‌ನೆಟ್ ಸೇವೆಯ ನೌಕರರು ಮತ್ತು ವಾಹನಗಳಿಗೆ ಸಂಸ್ಥೆ ನೀಡಿದ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದಾಗಿದೆ.

ಔಷಧಾಲಯಗಳ ಸಹಿತ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಟ್ರಕ್‌ಗಳು, ಸರಕು ಅಥವಾ ಸರಕಿಗೆ ಸಂಬಂಧಿಸಿದ ಖಾಲಿ ವಾಹನಗಳ ಓಡಾಟಕ್ಕೆ ನಿರ್ಬಂಧವಿರುವುದಿಲ್ಲ. ವಸ್ತುಗಳ ಹೋಂ ಡೆಲಿವರಿ ಸೇವೆಗಳು ಮತ್ತು ಇ-ಕಾಮರ್ಸ್ ಕಂಪೆನಿಗಳ ಕಾರ್ಯಾಚರಣೆಯನ್ನು ಅನುಮತಿಸಲಾಗಿದೆ.

ರೈಲುಗಳು, ವಿಮಾನಯಾನಕ್ಕೆ ಅನುಮತಿ ಇದೆ. ಬಸ್ ಟರ್ಮಿನಲ್‌ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಇತ್ಯಾದಿಗಳಿಗೆ ಸಾರ್ವಜನಿಕ ಸಾರಿಗೆ ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಚಲನೆ, ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣದ ದಾಖಲೆಗಳು/ಟಿಕೆಟ್‌ಗಳನ್ನು ತೋರಿಸಿ ಸಂಚರಿಸಲು ಅವಕಾಶವಿದೆ.

ವಾರಾಂತ್ಯ ಕರ್ಫ್ಯೂ 

ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು, ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಅಗತ್ಯ ಸೇವೆಗಳು ಇರಲಿದೆ. 24/7 ಕಾರ್ಯಾಚರಣೆಗಳ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು /ಕಂಪೆನಿಗಳು/ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಟೆಲಿಕಾಂ ಮತ್ತು ಇಂಟರ್‌ನೆಟ್ ಸೇವೆಯ ನೌಕರರು ಕೂಡ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದಾಗಿದೆ.

ರೋಗಿಗಳು ಮತ್ತವರ ಪರಿಚಾರಕರನ್ನು ಕರೆದೊಯ್ಯಲು ಅನುಮತಿಸಲಾಗಿದೆ. ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ತಿಂಡಿ, ತಿನಿಸು ಊಟವನ್ನು ಮಾಡುವಂತಿಲ್ಲ. ಆದರೆ ಮನೆಗೆ ಪಾರ್ಸಲ್ ಕೊಂಡೊಯ್ಯಲು ಅವಕಾಶವಿದೆ.

ಗರಿಷ್ಟ 25 ಮಂದಿಯ ಜನರ ಮಿತಿಯೊಳಗೆ ನಿಗದಿಪಡಿಸಿದ ವಿವಾಹ ಕಾರ್ಯಕ್ರಮ ಆಯೋಜಿಸಬಹುದಾಗಿದೆ ಮತ್ತು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ 5 ಜನರ ಮಿತಿಯನ್ನು ಹೇರಲಾಗಿದೆ.

ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು, ಮಾಂಸ, ಡೈರಿ-ಹಾಲಿನ ಬೂತುಗಳು, ಪ್ರಾಣಿಗಳ ಮೇವುಗಳನ್ನು ಮಾರಾಟ ಮಾಡಬಹುದು. ನಿಗದಿತ ಸಮಯದೊಳಗೆ ಬೀದಿ ಬದಿ ವ್ಯಾಪಾರ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News