ಉಡುಪಿ: ಕೋವಿಡ್ ಗೆ ಯುವತಿ ಬಲಿ; 166 ಮಂದಿಗೆ ಕೊರೋನ ಸೋಂಕು
ಉಡುಪಿ, ಜೂ. 20: ಜಿಲ್ಲೆಯಲ್ಲಿ ರವಿವಾರ ಒಟ್ಟು 166 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ದಿನದಲ್ಲಿ 35ರ ಹರೆಯದ ಯುವತಿಯೊಬ್ಬರು ಮೃತಪಟ್ಟರೆ, 190 ಮಂದಿ ಚಿಕಿತ್ಸೆಯಿಂದ ಗುಣಮುಖ ರಾಗಿದ್ದಾರೆ. ಸದ್ಯ 1870 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಉಡುಪಿಯ 35 ವರ್ಷ ಪ್ರಾಯದ ಯುವತಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೋವಿಡ್ ಗುಣಲಕ್ಷಣ ಹಾಗೂ ತೀವ್ರವಾದ ಉಸಿರಾಟ ತೊಂದರೆ, ನ್ಯುಮೋನಿಯಾಯೊಂದಿಗೆ ಗಂಭೀರ ಇತರ ಸಮಸ್ಯೆಗಳನ್ನು ಹೊಂದಿದ್ದ ಆಕೆ ಜೂ.17ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶನಿವಾರ ಮೃತಪಟ್ಟರು.
ಇಂದು ಪಾಸಿಟಿವ್ ಬಂದ 166 ಮಂದಿಯಲ್ಲಿ 81 ಮಂದಿ ಪುರುಷರು ಹಾಗೂ 85 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 59, ಕುಂದಾಪುರ ತಾಲೂಕಿನ 44 ಹಾಗೂ ಕಾರ್ಕಳ ತಾಲೂಕಿನ 57 ಮಂದಿ ಇದ್ದು, ಉಳಿದ ಆರು ಮಂದಿ ಹೊರಜಿಲ್ಲೆಯವರು. ಇವರಲ್ಲಿ 14 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 152 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶನಿವಾರ 190 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 63,114ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3276 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 65,356 ಆಗಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,56,523 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಕಪ್ಪು ಶಿಲೀಂದ್ರ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದ ಆರು ಮಂದಿಯಲ್ಲಿ ಒಬ್ಬರು ಗುಣಮುಖರಾಗಿ ಇಂದು ಆಸ್ಪತ್ರೆ ಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಐವರು ಇನ್ನೂ ಚಿಕಿತ್ಸೆಯಲ್ಲಿದ್ದಾರೆ.
1876 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ರವಿವಾರ 1,876 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 1781 ಮಂದಿ ಲಸಿಕೆಯ ಮೊದಲ ಡೋಸ್ ಹಾಗೂ 95 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ಇಂದು 18ರಿಂದ 44 ವರ್ಷ ದೊಳಗಿನ 944 ಮಂದಿ ಮೊದಲ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 932 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಡಿಎಚ್‌ಓ ತಿಳಿಸಿದ್ದಾರೆ.