ಉಡುಪಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯ ಆರ್ಭಟ

Update: 2021-06-20 15:25 GMT

ಉಡುಪಿ, ಜೂ.20: ಜಿಲ್ಲೆಯಾದ್ಯಂತ ರವಿವಾರವೂ ಮಳೆಯ ಅರ್ಭಟ ಮುಂದುವರೆದಿದ್ದು, ಗಾಳಿಮಳೆಗೆ ಜಿಲ್ಲೆಯಲ್ಲಿ ಹಲವು ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕಾಪು ತಾಲ್ಲೂಕಿನಲ್ಲಿ ಶನಿವಾರ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.

ರವಿವಾರ ನಸುಕಿನ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದಲ್ಲಿ ಹರಿಯುವ ಇಂದ್ರಾಣಿ ಹಾಗೂ ತಾಲೂಕಿನಾದ್ಯಂತ ಹರಿಯುವ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿ 63.9ಮಿ.ಮೀ , ಕಾರ್ಕಳ 97.2 ಮಿ.ಮೀ., ಬ್ರಹ್ಮಾವರ 52.1ಮಿ.ಮೀ., ಕಾಪು 97.1 ಮಿ.ಮೀ., ಕುಂದಾಪುರ 103ಮಿ.ಮೀ., ಬೈಂದೂರು 93.4ಮಿ.ಮೀ., ಹೆಬ್ರಿ 85.3ಮಿ.ಮೀ. ಮಳೆ ಯಾಗಿದ್ದು ಜಿಲ್ಲೆಯಾದ್ಯಂತ ಸರಾಸರಿ 91.2ಮಿ.ಮೀ. ಮಳೆಯಾಗಿದೆ.

ಹಲವೆಡೆ ನೆರೆ ಭೀತಿ: ಕಾಪು ತಾಲೂಕಿನ ಕುಂಜೂರು ಶ್ರೀದುರ್ಗಾ ದೇವಸ್ಥಾನದ ಮುಂಭಾಗದ ಬೈಲು ಪ್ರದೇಶವು ಸಂಪೂರ್ಣ ನೆರೆ ನೀರಿನಿಂದ ಆವೃತವಾಗಿ, ದೇವಸ್ಥಾನದ ಅಂಗಣಕ್ಕೆ ನೀರು ಹರಿಯುತ್ತಿದೆ. ಬೆಳಪು, ಅದಮಾರು, ಎರ್ಮಾಳು, ಮಜೂರು, ಕುತ್ಯಾರು, ಇನ್ನಂಜೆ ಸಹಿತ ವಿವಿಧೆಡೆಗಳಲ್ಲಿನ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಎದುರಾಗಿದೆ.

ಕಾಪು ತಾಲ್ಲೂಕಿನಲ್ಲಿ ರವಿವಾರ ಬೆಳಗ್ಗೆ ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿಯಾಗಿವೆ. ನಡ್ಸಾಲು ಗ್ರಾಮದ ಕಂಚಿನಡ್ಕ ಸುರೇಶ್ ಹಾಗೂ ಶಕಿಲಾ ಅವರ ಮನೆಗಳಿಗೆ ಸಿಡಿಲು ಬಡಿದು ಕ್ರಮವಾಗಿ 40 ಸಾವಿರ ರೂ. ಹಾಗೂ 80 ಸಾವಿರ ರೂ. ನಷ್ಟವಾಗಿದೆ ಎಂದು ಗ್ರಾಮಕರಣಿಕ ಶ್ಯಾಂ ಸುಂದರ್ ತಿಳಿಸಿದ್ದಾರೆ.

ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಕೈಪುಂಜಾಲು ಮತ್ತು ಪೊಲಿಪು ಪರಿಸರದಲ್ಲಿ ಸಿಡಿಲಾಭರ್ಟಕ್ಕೆ ಎರಡು ಮನೆಗಳ ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಹೊಗಿದ್ದು ಅಪಾರ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.

ಹಲವು ಮನೆಗಳಿಗೆ ಹಾನಿ: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕಮಲ ಭಂಡಾರ್ತಿ ಹಾಗೂ ನಾರಾಯಣ ಶೆಟ್ಟಿಗಾರ ಎಂಬವರ ಮನೆಗಳಿಗೆ ಹಾನಿ ಯಾಗಿ ಒಟ್ಟು 45ಸಾವಿರ ರೂ., ಕಾಪು ತಾಲೂಕಿನ ಪಡು ಗ್ರಾಮದ ವಿಜಯ ಶೆಟ್ಟಿ ಹಾಗೂ ಪಲಿಮಾರು ಗ್ರಾಮದ ವನಿತಾ ದೇವಾಡಿಗ ಮನೆಗಳಿಗೆ ಹಾನಿಯಾಗಿ ಒಟ್ಟು 70ಸಾವಿರ ರೂ. ನಷ್ಟವಾಗಿದೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಶಿವ ಮೊಗೇರ ಎಂಬವರ ಮನೆ ಮೇಲೆ ಮರಬಿದ್ದು 1.50ಲಕ್ಷ ರೂ., ಹೆಬ್ರಿ ಗ್ರಾಮದ ಶಂಕರ ಜೆನ್ನಿ ಮನೆಗೆ ಹಾನಿಯಾಗಿ 3.50ಲಕ್ಷ ರೂ. ಮತ್ತು ಕೃಷ್ಣ ಜೆನ್ನಿ ಎಂಬವರಿಗೆ 1ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಮೆಸ್ಕಾಂಗೆ 12ಲಕ್ಷ ನಷ್ಟ: ಗಾಳಿಮಳೆಯಿಂದಾಗಿ ಜಿಲ್ಲೆಯಾದ್ಯಂತ ವಿವಿಧ ಕಡೆಯಲ್ಲಿ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿ ಗಳು ಧರೆಗೆ ಉರುಳಿ ಬಿದ್ದಿದ್ದು, ಇದರ ಪರಿಣಾಮ ರವಿವಾರ ಮುಂಜಾನೆ ಯಿಂದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಜಿಲ್ಲೆಯಲ್ಲಿ ಒಟ್ಟು 23 ವಿದ್ಯುತ್ ಕಂಬಗಳು, 4 ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿದ್ದು, ಇದರಿಂದ ಮೆಸ್ಕಾಂಗೆ ಒಟ್ಟು 12 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಬಾಗದ ಬೈಲು ಪ್ರದೇಶವು ಸಂಪೂರ್ಣ ನೆರೆ ನೀರಿನಿಂದಾವೃತಗೊಂಡಿದ್ದು, ದೇವಸ್ಥಾನದ ಅಂಗಣಕ್ಕೆ ನೀರು ಹರಿಯುತ್ತಿದೆ.

ಪಡುಬಿದ್ರಿ ಕಂಚಿನಡ್ಕದಲ್ಲಿ ಬಾನುವಾರ ಬೆಳಗ್ಗೆ ಸಿಡಿದ ಸಿಡಿಲಿನಿಂದ ಮನೆಗಳಿಗೆ ಹಾನಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News