×
Ad

ತ್ರಿಪುರಾ: ಜಾನುವಾರು ಕಳವು ಶಂಕೆ, ಮೂವರ ಥಳಿಸಿ ಹತ್ಯೆ

Update: 2021-06-20 21:20 IST

ಅಗರ್ತಲ, ಜೂ. 20: ಜಾನುವಾರು ಕಳವುಗೈದ ಶಂಕೆಯಲ್ಲಿ ಮೂವರನ್ನು ಥಳಿಸಿ ಹತ್ಯೆಗೈದ ಘಟನೆ ತ್ರಿಪುರಾದ ಖೊವಾಯಿ ಜಿಲ್ಲೆಯಲ್ಲಿ ರವಿವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಳಿತಕ್ಕೊಳಗಾಗಿ ಹತ್ಯೆಯಾದವರನ್ನು ಜಾಯಿದ್ ಹುಸೈನ್ (30), ಬಿಲಾಲ್ ಮಿಯಾ (28), ಸೈಫುಲ್ ಇಸ್ಲಾಂ (18) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸೆಪಾಹಿಜಾಲಾ ಜಿಲ್ಲೆಯ ಸೋನಾಮುರ ಉಪವಲಯದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಐದು ಜಾನುವಾರಗಳಿದ್ದ ಮಿನಿ ಟ್ರಕ್ಕೊಂದು ಅಗರ್ತಲದತ್ತ ತೆರಳುತ್ತಿರುವುದನ್ನು ಮುಂಜಾನೆ 4.30ರ ಹೊತ್ತಿಗೆ ನಮನಜೋಯಪಾರಾದ ಗ್ರಾಮ ನಿವಾಸಿಗಳು ಗಮನಿಸಿದ್ದರು ಎಂದು ಪೊಲೀಸ್ ಅಧೀಕ್ಷಕ ಕಿರಣ್ ಕುಮಾರ್ ಹೇಳಿದ್ದಾರೆ.

ಅವರು ಮಿನಿ ಟ್ರಕ್ಕ್ ಅನ್ನು ಹಿಂಬಾಲಿಸಿಕೊಂಡು ಹೋಗಿ ಉತ್ತರ ಮಹಾರಾಣಿಪುರ ಗ್ರಾಮದಲ್ಲಿ ನಿಲ್ಲಿಸುವಲ್ಲಿ ಸಫಲರಾದರು. ಮಿನಿ ಟ್ರಕ್ನಲ್ಲಿದ್ದ ಮೂವರ ಮೇಲೆ ಗ್ರಾಮ ನಿವಾಸಿಗಳು ಮಾರಕ ಆಯುಧಗಳಿಂದ ಹಲ್ಲೆ ನಡೆಸಿದರು.

ಇವರಲ್ಲಿ ಸೈಫುಲ್ಲಾ ಗ್ರಾಮ ನಿವಾಸಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದ. ಗ್ರಾಮ ನಿವಾಸಿಗಳು ಆತನನ್ನು ಉತ್ತರ ಮಹಾರಾಣಿಪುರದ ಬುಡಕಟ್ಟು ಕುಗ್ರಾಮ ಮುಂಗಿಯಾಕಾಮಿಯಲ್ಲಿ ಸೆರೆ ಹಿಡಿದು ಥಳಿಸಿದರು ಎಂದು ಅವರು ತಿಳಿಸಿದ್ದಾರೆ.

ಕೂಡಲೇ ಎರಡೂ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತ್ರಸ್ತರನ್ನು ಗ್ರಾಮಸ್ಥರ ಕೈಯಿಂದ ಬಿಡಿಸಿ ಮೊದಲು ಸಮೀಪದ ಆಸ್ಪತ್ರೆ ಹಾಗೂ ಅನಂತರ ಅಗರ್ತಲದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿದರು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು ಎಂದು ಕುಮಾರ್ ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News