2018ರ ಆಲ್ವಾರ್ ಥಳಿಸಿ ಹತ್ಯೆ ಪ್ರಕರಣ: ವಿಎಚ್‌ಪಿ ನಾಯಕನ ಬಂಧನ

Update: 2021-06-20 16:30 GMT

ಜೈಪುರ, ಜೂ. 20: ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ 2018ರಲ್ಲಿ ಜಾನುವಾರ ಸಾಗಾಟದ ಶಂಕೆಯಲ್ಲಿ ಅಕ್ಬರ್ ಖಾನ್ ಅವರನ್ನು ಗುಂಪು ಥಳಿಸಿ ಹತ್ಯೆಗೈದ ಘಟನೆಯಲ್ಲಿ ಭಾಗಿಯಾದ ಆರೋಪದಲ್ಲಿ ವಿಶ್ವಹಿಂದೂ ಪರಿಷತ್ (ವಿಎಚ್ಪಿ)ನ ಸ್ಥಳೀಯ ನಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಆಲ್ವಾರ್ ಗುಂಪು ಥಳಿಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮಗಢ ಪೊಲೀಸರು ಬಂಧಿಸುತ್ತಿರುವ ಐದನೇ ವ್ಯಕ್ತಿ ಇವರಾಗಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳಾದ ಪರಮ್ಜೀತ್ ಸಿಂಗ್, ನರೇಶ್ ಶರ್ಮಾ, ವಿಜಯ ಕುಮಾರ್ ಹಾಗೂ ಧರ್ಮೇಂದ್ರ ಯಾದವ್ ಅವರ ವಿರುದ್ಧ 2019ರಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ಅಂತಿಮ ವಾದವನ್ನು ನ್ಯಾಯಾಲಯ ಇನ್ನಷ್ಟೇ ಆಲಿಸಬೇಕಿದೆ.

ರಾಮಗಢದ ಪೊಲೀಸರು ಮೂರ್ನಾಲ್ಕು ದಿನಗಳ ಹಿಂದೆ ವಿಎಚ್ಪಿ ನಾಯಕ ನವಲ್ ಕಿಶೋರ್ ಶರ್ಮಾನನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಎಎಸ್ಪಿ ಶ್ರೇಣಿಯ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದು ಆಲ್ವಾರ್ ಎಸ್ಪಿ ತೇಜಸ್ವಿನಿ ಗೌತಮ್ ಹೇಳಿದ್ದಾರೆ.

ಜಾನುವಾರು ಸಾಗಾಟದ ಶಂಕೆಯಲ್ಲಿ 2018 ಜುಲೈ 20ರಂದು ರಾಮಗಢದಲ್ಲಿ ಗುಂಪೊಂದು ಅಕ್ಬರ್ ಹಾಗೂ ಆತನ ಗೆಳೆಯ ಅಸ್ಲಾಂಗೆ ಥಳಿಸಿತ್ತು. ಈ ಘಟನೆಯಲ್ಲಿ ಅಸ್ಲಾಂ ತಪ್ಪಿಸಿಕೊಂಡಿದ್ದ. ಆದರೆ, ಥಳಿತದಿಂದ ಗಂಭೀರ ಗಾಯಗೊಂಡಿದ್ದ ಅಕ್ಬರ್ ಸಾವನ್ನಪ್ಪಿದ್ದರು.

ರಾಮಗಢದ ಗೋರಕ್ಷಕ ಘಟಕದ ವರಿಷ್ಠ ನವಲ್ ಕಿಶೋರ್ ಶರ್ಮಾ ನೇತೃತ್ವ ಗುಂಪು ಅಕ್ಬರ್ ಖಾನ್ನನ್ನು ಥಳಿಸಿ ಹತ್ಯೆಗೈದಿದಿದೆ ಎಂದು ಅಕ್ಬರ್ ಖಾನ್ ಕುಟುಂಬ ಆರೋಪಿಸಿತ್ತು.

ವಿಎಚ್ಪಿ ನಾಯಕನನ್ನು ಗುರುವಾರ ಬಂಧಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಎಎಸ್ಪಿ (ಗ್ರಾಮೀಣ) ಶ್ರೀರಾಮ್ ಮೀನಾ ಹೇಳಿದ್ದಾರೆ. ನವಲ್ ಕಿಶೋರ್ ಶರ್ಮಾನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News