ಮುತ್ತೂರು : ಗುಡ್ಡ ಕುಸಿತ; ಮಣ್ಣಿನಡಿಗೆ ಬಿದ್ದ ಕಾರ್ಮಿಕ ಅಪಾಯದಿಂದ ಪಾರು

Update: 2021-06-20 16:44 GMT

ಮಂಗಳೂರು, ಜೂ.20: ತಾಲೂಕಿನ ಮುತ್ತೂರು ಗ್ರಾಪಂ ವ್ಯಾಪ್ತಿಯ ಮಾರ್ಗದಂಗಡಿ-ನೋಣಾಲ್‌ನ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಕಾರ್ಮಿಕನೊಬ್ಬ ಮಣ್ಣಿನಡಿಗೆ ಬಿದ್ದ ಘಟನೆ ರವಿವಾರ ನಡೆದಿದೆ.

ಅರಳ ಗ್ರಾಮದ ರಾಜೇಶ್ ಪೂಜಾರಿ (28) ಅಪಾಯದಿಂದ ಪಾರಾದ ಕಾರ್ಮಿಕ.

ಗಂಜಿಮಠದಿಂದ ಮೂಲರಪಟ್ಣಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯ ಒಂದೆರಡು ಕಡೆ ಗುಡ್ಡಕುಸಿತ ತಡೆಯಲು ರಕ್ಷಣಾ ಗೋಡೆ ನಿರ್ಮಿಸಲಾಗುತ್ತಿದೆ. ನೋಣಾಲ್ ಬಳಿ ರಾಜೇಶ್ ಸಹಿತ ಇಬ್ಬರು ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ತಡೆಗೋಡೆಯೊಂದಿಗೆ ಗುಡ್ಡ ಕುಸಿಯಿತು. ಈ ವೇಳೆ ಮಣ್ಣಿನಡಿಗೆ ಬಿದ್ದ ರಾಜೇಶ್‌ರ ತಲೆ ಮಾತ್ರ ಹೊರಗೆ ಕಾಣುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಿದರು. 2 ಗಂಟೆಯ ಕಾಲ ನಡೆದ ಕಾರ್ಯಾಚರಣೆಯಲ್ಲಿ ರಾಜೇಶ್ ಪೂಜಾರಿಯನ್ನು ಅಪಾಯದಿಂದ ಪಾರು ಮಾಡಿದರು. ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಗುಡ್ಡ ಕುಸಿತಗೊಂಡಿದ್ದು, ಮತ್ತಷ್ಟು ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News