ಉತ್ತರ ಕೊರಿಯಾದಲ್ಲಿ ತೀವ್ರ ಆಹಾರ ಬಿಕ್ಕಟ್ಟು: ಕಾಫಿಗೆ 7,000 ರೂ., ಬಾಳೆಹಣ್ಣಿಗೆ 3,300 ರೂ. !

Update: 2021-06-20 17:38 GMT

ಹೊಸದಿಲ್ಲಿ,ಜೂ.20: ಒಂದು ಕೆಜಿ ಬಾಳೆಹಣ್ಣಿಗೆ 3,336 ರೂ.,ಒಂದು ಪ್ಯಾಕೆಟ್ ಬ್ಲಾಕ್ ಟೀಗೆ 5,617 ರೂ.,ಕಾಫಿಗೆ 7,381 ರೂ.ಮತ್ತು ಒಂದು ಕೆಜಿ ಕಾರ್ನ್ ಗೆ 204.81 ರೂ. ಇವು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಉತ್ತರ ಕೊರಿಯಾದ ಪ್ರಜೆಗಳು ತೆರುತ್ತಿರುವ ಬೆಲೆಗಳು. ಉತ್ತರ ಕೊರಿಯಾದಲ್ಲಿನ ತನ್ನ ಸಂಪರ್ಕಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸುವ ದಕ್ಷಿಣ ಕೊರಿಯಾದ ಎನ್‌ಕೆ ನ್ಯೂಸ್ ಹೀಗೊಂದು ವರದಿಯನ್ನು ಪ್ರಕಟಿಸಿದೆ.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಗಡಿಗಳ ಮುಚ್ಚುವಿಕೆ, ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ಅತಿಯಾದ ನೆರೆ ಹಾವಳಿ ಇವು ಉತ್ತರ ಕೊರಿಯಾದಲ್ಲಿ ತೀವ್ರ ಆಹಾರ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳಾಗಿವೆ.

ಆಹಾರ, ರಸಗೊಬ್ಬರ ಮತ್ತು ಇಂಧನಗಳಿಗಾಗಿ ಉ.ಕೊರಿಯಾ ಚೀನಾವನ್ನು ಅವಲಂಬಿಸಿದೆ. ಆದರೆ ಅದರ ಆಮದುಗಳು 2.5 ಶತಕೋಟಿ ಡಾ.ಗಳಿಂದ 50 ಕೋಟಿ ಡಾ.ಗಳಿಗೆ ಇಳಿದಿದೆ ಎಂದು ಚೀನಾದ ಅಧಿಕೃತ ಕಸ್ಟಮ್ಸ್ ದತ್ತಾಂಶಗಳು ತೋರಿಸಿವೆ.

ಉ.ಕೊರಿಯಾದಲ್ಲಿನ ವಾಸ್ತವ ಸ್ಥಿತಿ ಎಷ್ಟೊಂದು ಗಂಭೀರವಾಗಿದೆ ಎಂದರೆ ರಸಗೊಬ್ಬರಗಳ ತಯಾರಿಕೆಗಾಗಿ ಪ್ರತಿದಿನ ಎರಡು ಲೀ. ಮೂತ್ರವನ್ನು ನೀಡುವಂತೆ ದೇಶದಲ್ಲಿನ ರೈತರಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಆಹಾರ ಸ್ಥಿತಿಯು ಗಂಭೀರವಾಗಿದೆ ಎಂದು ಒಪ್ಪಿಕೊಳ್ಳುವ ಮೂಲಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿರುವುದನ್ನು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. 1990ರ ದಶಕದಲ್ಲಿ ಉ.ಕೊರಿಯಾ ಭೀಕರ ಕ್ಷಾಮಕ್ಕೆ ಸಾಕ್ಷಿಯಾಗಿದ್ದು,ಆಹಾರ ಸಿಗದೆ ಸಾವಿರಾರು ಜನರು ಸತ್ತಿದ್ದರು.

ಬಡತನದಲ್ಲಿ ಬೇಯುತ್ತಿರುವ ಉ.ಕೊರಿಯಾ ಅಣ್ವಸ್ತ್ರಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದುವ ತನ್ನ ಹುಚ್ಚಿನಿಂದಾಗಿ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದ್ದು ದೀರ್ಘ ಸಮಯದಿಂದ ಆಹಾರದ ಕೊರತೆಯ ಸುಳಿಯಲ್ಲಿ ಸಿಲುಕಿದೆ. ಜನರು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಳೆದ ವರ್ಷ ಕೊರೋನವೈರಸ್ ಸಾಂಕ್ರಾಮಿಕ ಮತ್ತು ಸರಣಿ ಚಂಡಮಾರುತಗಳು ಹಾಗೂ ಪ್ರವಾಹಗಳು ಮೊದಲೇ ಕುಸಿದಿದ್ದ ದೇಶದ ಆರ್ಥಿಕತೆ ಇನ್ನಷ್ಟು ಕುಸಿಯುವಂತೆ ಮಾಡಿವೆ.

ಆಡಳಿತಾರೂಢ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಕೇಂದ್ರ ಸಮಿತಿಯ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಕಿಮ್,ಈ ವರ್ಷ ದೇಶದ ಆರ್ಥಿಕತೆಯು ಸುಧಾರಿಸಿದೆ,ಆದರೆ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ. ಕಳೆದ ವರ್ಷದ ನೆರೆಯಿಂದಾಗಿ ಕೃಷಿ ಕ್ಷೇತ್ರವು ಉತ್ಪಾದನೆಯಲ್ಲಿ ವಿಫಲಗೊಂಡಿರುವುದರಿಂದ ಆಹಾರ ಸ್ಥಿತಿಯು ಗಂಭೀರವಾಗಿದೆ ಎಂದು ಹೇಳಿದ್ದನ್ನು ಅಧಿಕೃತ ಕೆಸಿಎನ್ಎ ನ್ಯೂಸ್ ಏಜೆನ್ಸಿ ಬುಧವಾರ ವರದಿ ಮಾಡಿತ್ತು.

ಉ.ಕೊರಿಯಾದಲ್ಲಿ ವೈದ್ಯಕೀಯ ಮೂಲಸೌಕರ್ಯಗಳು ಕಳಪೆಯಾಗಿದ್ದು, ಔಷಧಿಗಳ ತೀವ್ರ ಕೊರತೆಯಿದೆ. ಹೀಗಾಗಿ ಕೊರೋನವೈರಸ್ ಸಾಂಕ್ರಾಮಿಕವು ಈ ಪ್ರತ್ಯೇಕಿತ ದೇಶದಲ್ಲಿ ಹಾಹಾಕಾರವನ್ನು ಸೃಷ್ಟಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವದಲ್ಲಿ ಮೊಟ್ಟಮೊದಲು ಕೊರೋನವೈರಸ್ ಸಾಂಕ್ರಾಮಿಕ ಚೀನಾದಲ್ಲಿ ಭುಗಿಲೆದ್ದ ಬೆನ್ನಲ್ಲೇ ಅದು ತನ್ನ ದೇಶಕ್ಕೆ ಹರಡುವುದನ್ನು ತಡೆಯಲು ಕಿಮ್ ಕಳೆದ ವರ್ಷದ ಜನವರಿಯಲ್ಲೇ ಗಡಿಗಳನ್ನು ಮುಚ್ಚಿದ್ದಾರೆ. ತನ್ನಲ್ಲಿ ಸಾಂಕ್ರಾಮಿಕದ ಪ್ರಕರಣಗಳಿಲ್ಲ ಎಂದು ಉ.ಕೊರಿಯಾ ಹೇಳಿಕೊಳ್ಳುತ್ತಲೇ ಬಂದಿದೆಯಾದರೂ, ಗಡಿ ನಿರ್ಬಂಧಕ್ಕಾಗಿ ಅದು ಭಾರೀ ಆರ್ಥಿಕ ಬೆಲೆಯನ್ನು ತೆತ್ತಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News