ಫೇಸ್‌ಬುಕ್ ಗೆಳೆಯನಿಂದ ಮಹಿಳೆಗೆ ವಂಚನೆ

Update: 2021-06-21 18:22 GMT

ಮಂಗಳೂರು, ಜೂ.21: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಉಡುಗೊರೆಯಾಗಿ ದೊಡ್ಡ ಮೊತ್ತದ ಹಣ ನೀಡುವುದಾಗಿ ಹೇಳಿ ಮಹಿಳೆಯಿಂದ 1.15 ಲ.ರೂ. ಪಡೆದು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಯೊಬ್ಬರ ಫೇಸ್‌ಬುಕ್ ಖಾತೆಗೆ ನೆಲ್ಸನ್ ಮಾರ್ಕ್ ಹೆಸರಿನ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿತ್ತು. ಮಹಿಳೆಯು ಅದನ್ನು ಅಕ್ಸೆಪ್ಟ್ ಮಾಡಿದ್ದರು. ಅನಂತರ ಆ ವ್ಯಕ್ತಿ ಮತ್ತು ಮಹಿಳೆಯ ನಡುವೆ ಫೇಸ್‌ಬುಕ್ ಮುಖಾಂತರ ಸಂದೇಶ ವಿನಿಮಯ ನಡೆಯುತ್ತಿತ್ತು ಎನ್ನಲಾಗಿದೆ. ಬಳಿಕ ಅಪರಿಚಿತನು ಮಹಿಳೆಯ ವಾಟ್ಸಪ್ ಸಂಖ್ಯೆ ಪಡೆದು +44751737590 ಸಂಖ್ಯೆಯಿಂದ ಮೆಸೇಜ್ ಕಳುಹಿಸಿ ತಾನು ಉಡುಗೊರೆಯಾಗಿ ದೊಡ್ಡ ಮೊತ್ತದ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುವುದಾಗಿಯೂ ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಕಳುಹಿಸುವಂತೆ ಸೂಚಿಸಿದ. ಅದನ್ನು ನಂಬಿದ ಮಹಿಳೆಯು ತನ್ನ ಬ್ಯಾಂಕ್ ಖಾತೆಯ ವಿವರಗಳನ್ನು ಕಳುಹಿಸಿದ್ದರು. ತದನಂತರ ಮಹಿಳೆಯ ಖಾತೆಗೆ ಹಣ ಜಮೆಯಾಗಿದೆ ಎಂದು ತಿಳಿಸಿ ಡೆಪಾಸಿಟ್ ಸ್ಲಿಪ್‌ನ್ನು ಕಳುಹಿಸಿಕೊಟ್ಟಿದ್ದಾನೆ. ಅಲ್ಲದೆ ಆ ಮೊತ್ತವನ್ನು ಪಡೆಯಬೇಕಾದರೆ ಆದಾಯ ತೆರಿಗೆ ಪಾವತಿಸಬೇಕು ಎಂದು ಹೇಳಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆಯು ಅಪರಿಚಿತ ಕಳುಹಿಸಿಕೊಟ್ಟ ಇಂಡಿಯನ್ ಬ್ಯಾಂಕ್ ದೆಹಲಿಯ ಖಾತೆ ಸಂಖ್ಯೆ 6997492562ಗೆ ಹಂತ ಹಂತವಾಗಿ 1.15 ಲ.ರೂ.ಗಳನ್ನು ತನ್ನ ಬ್ಯಾಂಕ್ ಖಾತೆ ಯಿಂದ ಪಾವತಿಸಿದ್ದಾರೆ. ಆದರೂ ತನಗೆ ಯಾವುದೇ ಉಡುಗೊರೆಯ ಮೊತ್ತ ನೀಡದೆ ವಂಚಿಸಲಾಗಿದೆ ಎಂದು ಮಹಿಳೆಯು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News