ಮಂಗಳೂರು: ಜನಾಗ್ರಹ ಆಂದೋಲನದ ಪ್ರತಿಭಟನೆ ತಡೆ ಹಿಡಿದ ಪೊಲೀಸರು

Update: 2021-06-22 08:42 GMT

ಮಂಗಳೂರು, ಜೂ.22: ಸಮಗ್ರ ಪ್ಯಾಕೇಜ್ ಹಾಗೂ ತುರ್ತು ಕ್ರಮಕ್ಕಾಗಿ ಒತ್ತಾಯಿಸಿ ಉಸ್ತುವಾರಿ ಸಚಿವರು, ಶಾಸಕರ ಕಚೇರಿ ಎದುರು ಜನಾಗ್ರಹ ಆಂದೋಲನದಿಂದ ಖಾಲಿ ಚೀಲಗಳನ್ನು ಸುಡಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮಂಗಳವಾರ ಬೆಳಗ್ಗೆ ಮಂಗಳೂರು ಪೊಲೀಸರು ತಡೆ ಹಿಡಿದರು.

ಪ್ರತಿಭಟನಾಕಾರರು ಪೊಲೀಸ್ ಠಾಣೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಂತರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದ ಪ್ರತಿಭಟನಾಕಾರರು, ಸಂಸದ ನಳಿನ್‌ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜನಪ್ರತಿನಿಧಿಗಳು ಪ್ರತಿಭಟನಾಕಾರರ ಮನವಿಯನ್ನು ಮುಖ್ಯಮಂತ್ರಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜನಾಗ್ರಹ ಆಂದೋಲನದ ಮುಖಂಡ ಉಮರ್ ಯು.ಎಚ್., ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರಕಾರವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯದ ನೂರಾರು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿಗೆ ಈಗಾಗಲೇ ಮೂರು ಬಾರಿ ಪತ್ರ ಬರೆದಿದ್ದಾರೆ. ಎರಡು ಸುತ್ತಿನ ರಾಜ್ಯವ್ಯಾಪಿ ಪ್ರತಿಭಟನೆಗಳೂ ನಡೆದಿವೆ. ಜನಾಗ್ರಹ, ಜನಪರ ಸಂಘಟನೆಗಳ ಒತ್ತಡಗಳಿಂದಾಗಿ ಎರಡು ಪ್ಯಾಕೇಜ್‌ಗಳನ್ನು ಸರಕಾರ ಘೋಷಿಸಿದೆ. ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇವು ಏನಕ್ಕೂ ಸಾಲದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೆರೆಹೊರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸಮಗ್ರ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪಕ್ಕದ ರಾಜ್ಯಗಳನ್ನು ಅನುಸರಿಸಿ, ಬಡವರಿಗೆ ಸಮಗ್ರ ಆಹಾರ ಕಿಟ್‌ನ್ನು ಕೊಡಬೇಕು. ಬಡವರ ಸಂಕಷ್ಟವನ್ನು ನಿವಾರಿಸಬೇಕು. ಲಾಕ್‌ಡೌನ್ ಸಂದರ್ಭ ಸಮಸ್ಯೆಗೆ ಒಳಗಾದವರಿಗೆ ರಾಜ್ಯ ಸರಕಾರ ಸಾಂತ್ವನ ನೀಡಬೇಕು ಎಂದು ಆಗ್ರಹಿಸಿದರು.

‘ಅನಾಥ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಬೇಕು’, ‘ಲಾಕ್‌ಡೌನ್ ಮಾಡುವುದು ಮಾತ್ರ ಸರಕಾರದ ಕೆಲಸವಲ್ಲ; ಲಾಕ್‌ ಆದ ಜನರನ್ನು ಸಲಹುವುದೂ ಸರಕಾರದ ಕರ್ತವ್ಯ’, ಕೋಟ್ಯಾಧೀಶರಿಗೆ ಕೋವಿಡ್ ಸುಂಕ ನಿಗದಿ ಮಾಡಿ ಬಡ ಕುಟುಂಬಗಳಿಗೆ ಸಮಗ್ರ ಪ್ಯಾಕೇಜ್ ಬಿಡುಗಡೆ ಮಾಡಿ’, ‘ರೈತರ ಬಿತ್ತನೆಗೆ ವಿಶೇಷ ಸಬ್ಸಿಡಿ ಕೊಡಲೇಬೇಕು’ ಎನ್ನುವ ಬೇಡಿಕೆಗಳ ಪ್ಲೇಕಾರ್ಡ್‌ಗಳನ್ನು ಈ ವೇಳೆ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಕ್ರಮ್ ಹಸನ್, ಮನಪಾ ಸದಸ್ಯ ಮುನೀಬ್ ಬೆಂಗ್ರೆ, ಅನ್ವರ್ ಸಾದತ್ ಬಜತ್ತೂರು, ಶರೀಫ್ ಪಾಂಡೇಶ್ವರ, ಸುಹೈಲ್ ಖಾನ್, ಪುರುಷೋತ್ತಮ ಚಿತ್ರಾಪುರ, ನಂದಗೋಪಾಲ ಎಸ್. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News