ಕೊರೋನ: ಸರಕಾರದ ವೈಫಲ್ಯತೆ ಖಂಡಿಸಿ ಉಡುಪಿ ಶಾಸಕರ ಕಚೇರಿ ಮುಂದೆ ಜನಾಗ್ರಹ ಆಂದೋಲನ

Update: 2021-06-22 11:31 GMT

ಉಡುಪಿ, ಜೂ.22: ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ವೈಫಲ್ಯತೆ ಖಂಡಿಸಿ ಹಾಗೂ ತುರ್ತು ಕ್ರಮ ಗಳಿಗೆ ಮತ್ತು ಸಮಗ್ರ ಪ್ಯಾಕೇಜ್‌ಗೆ ಆಗ್ರಹಿಸಿ ಜನಾಗ್ರಹ ಆಂದೋಲನದ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳು ಮಂಗಳವಾರ ಉಡುಪಿ ಶಾಸಕ ಕೆ.ರಘುಪತಿ ಭಟ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.

ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಮೊದಲ ಅಲೆಯ ಬಳಿಕ ಕೇಂದ್ರ ಸರಕಾರ ಕೊರೋನಾ ಮುಗಿದಿದೆ ಎಂದು ಸುಳ್ಳು ಹೇಳಿ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಿಸಿ ನೂರಾರು ರ್ಯಾಲಿ ನಡೆಸಿತು. ಇದರಿಂದ ಇಂದು ನಾವು ಎರಡನೇ ಅಲೆಯ ಪರಿಣಾಮ ಎದುರಿಸುವಂತಾಗಿದೆ. ನರೇಂದ್ರ ಮೋದಿ ಕೋವಿಡ್ ವಿಚಾರ ದಲ್ಲೂ ಸುಳ್ಳು ಹೇಳಿ ಜನರು ಮೈಮರೆಯುವಂತೆ ಮಾಡಿದರು. ಸಾವಿನ ಸಂಖ್ಯೆ ಯಲ್ಲೂ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಕೇರಳ ಸರಕಾರ 20 ಸಾವಿರ ಕೋಟಿ ಕೊರೋನ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಕಷ್ಟು ಸಂಪನ್ಮೂಲ ಇರುವ ಕರ್ನಾಟಕದಲ್ಲಿ ಕೇವಲ 2000 ಕೋಟಿ ಪರಿಹಾರ ಘೋಷಣೆ ಮಾಡಿ ಜನರನ್ನು ವಂಚಿಸಲಾಗಿದೆ. ಬಿಜೆಪಿ ಮುಖಂಡರು ಲಾಕ್‌ಡೌನ್‌ನಲ್ಲಿ ಜನರ ಹಸಿವಿನ ಬಗ್ಗೆ ಗಮನಕೊಡದೇ ಒಳಜಗಳದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಹಬಾಳ್ವೆ ಸಂಚಾಲಕ ಅಮೃತ್ ಶೆಣೈ ಮಾತನಾಡಿ, ಉಚಿತ ಲಸಿಕೆ ಎಂದು ಸರಕಾರ ಹೇಳಿದರೆ, ಖಾಸಗಿ ಆಸ್ಪತ್ರೆಯಲ್ಲಿ ಒಂದು ಸಾವಿರ ರೂ. ಪಡೆಯುತ್ತಿದ್ದಾರೆ. ಇದರಲ್ಲಿ ಬಿಜೆಪಿಯವರು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆಂಬುದು ಪ್ರಶ್ನೆಯಾಗಿದೆ. ಹಡಿಲು ಭೂಮಿ ಅಭಿವೃದ್ಧಿಗೆ ಐದು ಕೋಟಿ ರೂ. ವ್ಯಯ ಮಾಡುತ್ತಿರುವ ರಘುಪತಿ ಭಟ್, ಆ ಹಣವನ್ನು ಲಾಕ್‌ಡೌನ್‌ನಲ್ಲಿ ತೊಂದರೆಗೆ ಒಳಗಾದವರಿಗೆ ಹಾಗೂ ಕಷ್ಟದಲ್ಲಿರುವವರಿಗೆ ನೀಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕಿ ವೆರೋನಿಕ ಕರ್ನೇಲಿಯೋ ಮಾತನಾಡಿ, ಆರೋಗ್ಯ ಇಲಾಖೆ ಎರಡನೇ ಅಲೆ ಬಗ್ಗೆ ಮುನ್ನೆಚ್ಚರಿಕೆ ನೀಡಿದರೂ ಸರಕಾರದ ಬೇಜ ವಾಬ್ದಾರಿತನದಿಂದ ಸಾಕಷ್ಟು ಮಂದಿ ಬಲಿಯಾಗುವಂತಾಗಿದೆ. ಪ್ರಸ್ತುತ ಲಸಿಕೆ ವಿತರಣೆಯಲ್ಲೂ ರಾಜಕೀಯ ಹಾಗೂ ಅವ್ಯವಹಾರ ನಡೆಸಲಾಗುತ್ತಿದೆ ಎಂದು ದೂರಿದರು.

ವೆಲ್‌ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಮಾತ ನಾಡಿ, ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಬೇಕು. ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಬೇಕು. ಅರ್ಹ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು. ಕೃಷಿ ಬಿತ್ತನೆ ಬೀಜಗಳಿಗೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು, ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಮುಸ್ಲಿಮ್ ಒಕ್ಕೂಟ ಮಾಜಿ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ಎಸ್‌ಐಓ ಜಿಲ್ಲಾಧ್ಯಕ್ಷ ಅರ್ಬಜ್, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಅಧ್ಯಕ್ಷ ಶಬ್ಬೀರ್ ಮಲ್ಪೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News