ಅನ್‌ಲಾಕ್: ವಾಣಿಜ್ಯ ಚಟುವಟಿಕೆಗಳು ಚುರುಕು, ಸಹಜ ಸ್ಥಿತಿಯತ್ತ ಉಡುಪಿ

Update: 2021-06-22 12:40 GMT

ಉಡುಪಿ, ಜೂ.22: ಉಡುಪಿ ಜಿಲ್ಲೆಯನ್ನು ಅನ್‌ಲಾಕ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಇಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ಇದರಿಂದ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ. ಇದರೊಂದಿಗೆ ಉಡುಪಿ ಜಿಲ್ಲೆಯು ಸಹಜ ಸ್ಥಿತಿಯತ್ತ ಮರಳಿದೆ.

ಸುಮಾರು ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಕುಂದಾಪುರ, ಬೈಂದೂರು, ಕಾರ್ಕಳ, ಕಾಪು, ಉಡುಪಿ, ಬ್ರಹ್ಮಾವರ, ಹೆಬ್ರಿ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಬಟ್ಟೆ, ಚಿನ್ನಾಭರಣ, ಚಪ್ಪಲಿ, ಮೊಬೈಲ್, ಫನಿರ್ಚರ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ತೆರೆದು ವ್ಯಾಪಾರ ನಡೆಸಿದವು. ಹೊಟೇಲ್‌ಗಳಲ್ಲಿ ಶೇ.50 ಸಾಮರ್ಥ್ಯದೊಂದಿಗೆ ಗ್ರಾಹಕರು ಸಂಜೆ 5ಗಂಟೆಯ ವರೆಗೆ ಕುಳಿತು ಊಟ ಉಪಹಾರ ಸೇವಿಸಿದರು. ಆಟೋ ರಿಕ್ಷಾ, ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿದಿದ್ದವು.

ಅಂತರ್ ಜಿಲ್ಲಾ ಹಾಗೂ ತಾಲೂಕು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇಂದು ಕೂಡ ಮುಂದುವರೆದಿದೆ. ಕರಾವಳಿ ಬಸ್ ಮಾಲಕ ಸಂಘದ ಅಧೀನದಲ್ಲಿರುವ ಒಂದು ಕಂಪೆನಿಯ ನಾಲ್ಕು ಖಾಸಗಿ ಬಸ್‌ಗಳು ಉಡುಪಿ -ಕುಂದಾಪುರ ಮಾರ್ಗದಲ್ಲಿ ಸಂಚಾರ ಆರಂಭಿಸಿವೆ. ಆದರೆ ಕೆನರಾ ಬಸ್ ಮಾಲಕರ ಸಂಘದ ಅಧೀನದಲ್ಲಿರುವ ಯಾವುದೇ ಬಸ್‌ಗಳು ಇಂದು ಕೂಡ ಓಡಾಟ ನಡೆಸಿಲ್ಲ.

ಉಡುಪಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಹಾಗೂ ವಾಹನ ಸಂಚಾರ ಇಂದು ಹೆಚ್ಚಾಗಿ ಕಂಡುಬಂದವು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಐದು ಗಂಟೆಯ ನಂತರ ಇಡೀ ಜಿಲ್ಲೆ ಸಂಪೂರ್ಣ ಬಂದ್ ಆಗಿ ಸ್ತಬ್ಧಗೊಂಡಿತ್ತು. ನಂತರ ವಾಹನಗಳ ಓಡಾಟಕ್ಕೆ ಪೊಲೀಸರು ತಡೆಯೊಡ್ಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News