ಮಂಗಳೂರು: ಯುವಕನ ಮೃತದೇಹ ಪತ್ತೆ; ತನಿಖೆಗೆ ಮನೆಮಂದಿ ಆಗ್ರಹ

Update: 2021-06-22 13:47 GMT

ಮಂಗಳೂರು, ಜೂ.22: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುರತ್ಕಲ್ ಸಮೀಪದ ಕೃಷ್ಣಾಪುರ ಕ್ರಾಸ್ ನಿವಾಸಿ ಹಾಜಿ ಮುಹಮ್ಮದ್ ಶರೀಫ್‌ರ ಪುತ್ರ ಮುಹಮ್ಮದ್ ಫಹಾದ್ ಝಮೀರ್(18)ನ ಮೃತದೇಹವು ಸೋಮವಾರ ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಸಂಶಯವಿರುವ ಕಾರಣ ಸೂಕ್ತ ತನಿಖೆ ನಡೆಸುವಂತೆ ಮನೆ ಮಂದಿ ಆಗ್ರಹಿಸಿದ್ದಾರೆ.

ಪಿಯುಸಿ ಕಲಿಯುತ್ತಿದ್ದ ಫಹಾದ್ ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ. ಭೋಪಾಲ್‌ಗೆ ತರಬೇತಿಗೂ ಹೋಗಿದ್ದ. ಕೊರೋನ-ಲಾಕ್‌ಡೌನ್ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ಫಹಾದ್ ‘ಸ್ವಿಗ್ಗಿ’ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಜೂ.19ರ ಶನಿವಾರ ರಾತ್ರಿ ತನ್ನ ಅಣ್ಣನ ಸ್ನೇಹಿತನ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದ ಫಹಾದ್ ಮರಳಿ ಬಂದಿರಲಿಲ್ಲ.

ಜೂ.21ರ ಸೋಮವಾರ ಬೆಳಗ್ಗೆ ಸಸಿಹಿತ್ಲು ಸಮೀಪದ ರುದ್ರಭೂಮಿಯ ಹಿಂಬದಿಯ ಖಂಡಿಗೆ ಸೇತುವೆಯ ಬಳಿ ಮೊಬೈಲ್ ಸಹಿತ ಬೈಕೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹುಡುಕಾಡಿದಾಗ ನದಿ ಕಿನಾರೆಯಲ್ಲಿ ಯುವಕನ ಮೃತದೇಹವೊಂದು ಗುರುತು ಸಿಗಲಾರದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಜೂ.19ರಂದು ರಾತ್ರಿಯಿಂದ ಕಾಣೆಯಾಗಿದ್ದ ಕೃಷ್ಣಾಪುರ ಕ್ರಾಸ್ ನಿವಾಸಿ ಫಹಾದ್‌ನ ಮೃತದೇಹ ಇದೆಂದು ಗುರುತಿಸಲಾಗಿತ್ತು.

ತನಿಖೆಗೆ ಆಗ್ರಹ: ಶನಿವಾರ ರಾತ್ರಿ ಫುಡ್ ಡೆಲಿವರಿ ಕೆಲಸಕ್ಕೆ ಫಹಾದ್ ಮನೆಯಿಂದ ಹೊರಟಿದ್ದ. ಬಳಿಕ ಕಾಣೆಯಾಗಿದ್ದ. ಶನಿವಾರ ರಾತ್ರಿ ಮುಕ್ಕ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫಹಾದ್‌ನ ಸಾವು ಆಕಸ್ಮಿಕವಲ್ಲ. ಆತನ ಸಾವಿನ ಬಗ್ಗೆಯೂ ಸಂಶಯವಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಫಹಾದ್‌ನ ಸಹೋದರ ತೌಸೀಫ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News