ಭಾರತೀಯ ಒಲಿಂಪಿಕ್ ತಂಡಕ್ಕೆ ಹೆಚ್ಚುವರಿ ಕೋವಿಡ್ ನಿರ್ಬಂಧ ಹೇರಿದ ಜಪಾನ್ ವಿರುದ್ಧ ದೂರು ಸಲ್ಲಿಕೆ: ಕ್ರೀಡಾಸಚಿವ ರಿಜಿಜು

Update: 2021-06-22 16:02 GMT

ಹೊಸದಿಲ್ಲಿ,ಜೂ.22: ಭಾರತೀಯ ಒಲಿಂಪಿಕ್ ತಂಡಕ್ಕೆ ಜಪಾನ್ ವಿಧಿಸಿರುವ ಕಠಿಣ ಕೋವಿಡ್ ನಿರ್ಬಂಧಗಳ ವಿರುದ್ಧ ದೂರನ್ನು ಸಲ್ಲಿಸಲಾಗಿದ್ದು,ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ತಿಳಿಸಿದರು.

‌ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಭಾರತ ಸೇರಿದಂತೆ 11 ರಾಷ್ಟ್ರಗಳಿಂದ ಆಗಮಿಸುವವರಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ. ಒಲಿಂಪಿಕ್ಸ್ ಜು.23ರಿಂದ ಆರಂಭವಾಗಲಿದೆ.

ಭಾರತದಿಂದ ನಿರ್ಗಮಿಸುವ ಮುನ್ನ ಒಂದು ವಾರ ಕಾಲ ಪ್ರತಿದಿನ ಕೋವಿಡ್-19 ಪರೀಕ್ಷೆಗೊಳಗಾಗುವಂತೆ ಮತ್ತು ಟೋಕಿಯೊ ತಲುಪಿದ ಬಳಿಕ ಮೂರು ದಿನಗಳ ಕಾಲ ಇತರ ದೇಶಗಳ ಯಾರೊಂದಿಗೂ ಸಂವಾದಿಸದಂತೆ ಜಪಾನ್ ಸರಕಾರವು ಭಾರತೀಯ ಅಥ್ಲೀಟ್ಗಳು ಮತ್ತು ಅಧಿಕಾರಿಗಳಿಗೆ ಸೂಚಿಸಿದೆ. ಈ ನಿರ್ಬಂಧಗಳಿಗೆ ಭಾರತೀಯ ಒಲಿಂಪಿಕ್ ಸಂಘ (ಐಒಎ)ವು ಅಸಮಾಧಾನವನ್ನು ವ್ಯಕ್ತಪಡಿಸಿತ್ತು.
 
ಒಲಿಂಪಿಕ್ ಸನ್ನದಿನಂತೆ ಯಾವುದೇ ದೇಶದ ವಿರುದ್ಧ ಯಾವುದೇ ತಾರತಮ್ಯವನ್ನು ಎಸಗುವಂತಿಲ್ಲ. ಯಾವುದೇ ತಾರತಮ್ಯವಿದ್ದರೆ ಅದನ್ನು ನಿವಾರಿಸಬೇಕು ಎಂದು ಆನ್ಲೈನ್ನಲ್ಲಿ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ತಿಳಿಸಿದ ರಿಜಿಜು,‘ನನ್ನ ಸೂಚನೆಯ ಮೇರೆಗೆ ಐಒಎ ವಿಧ್ಯುಕ್ತ ದೂರನ್ನು ದಾಖಲಿಸಿದೆ. ನಮ್ಮ ಅಥ್ಲೀಟ್ಗಳ ಸಿದ್ಧತೆ ಮತ್ತು ಅವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಯಾವುದೇ ಕ್ರಮವನ್ನು ನಾವು ವಿರೋಧಿಸುತ್ತೇವೆ. ಒಲಿಂಪಿಕ್ಸ್ ಸವಾಲಿನ ಸ್ಥಿತಿಯಲ್ಲಿ ನಡೆಯುತ್ತಿದೆ,ಅದು ಪ್ರತಿಯೊಬ್ಬರಿಗೂ ಸವಾಲು ಆಗಿದೆ’ ಎಂದರು.

ಕೋವಿಡ್-19 ಪರೀಕ್ಷೆಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸುವಂತೆ ಐಒಎ ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿಯನ್ನು ಕೇಳಿಕೊಂಡಿದೆ.

ಟೋಕಿಯೊಕ್ಕೆ ತೆರಳುವ ಎಲ್ಲ ಭಾರತೀಯ ಅಥ್ಲೀಟ್ಗಳಿಗೆ ಇಲ್ಲಿಂದ ನಿರ್ಗಮಿಸುವ ಮುನ್ನ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಹೆಚ್ಚಿನವರು ಮೊದಲ ಡೋಸ್ ಪಡೆದಿದ್ದು,ತಮ್ಮ ಎರಡನೇ ಡೋಸ್ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹೇಳಿದ ರಿಜಿಜು,ವಿದೇಶಗಳಲ್ಲಿ ತರಬೇತಿಯಲ್ಲಿರುವ ಅಥ್ಲೀಟ್ಗಳು ನೇರವಾಗಿ ಟೋಕಿಯೊ ತಲುಪಲಿದ್ದಾರೆ. ಹೀಗಾಗಿ ಅವರು ತರಬೇತಿ ಪಡೆಯುತ್ತಿರುವ ದೇಶಗಳಲ್ಲಿಯ ಭಾರತೀಯ ರಾಯಭಾರ ಕಚೇರಿಗಳ ಸಹಕಾರದೊಂದಿಗೆ ಅವರಿಗೆ ಲಸಿಕೆಯನ್ನು ಕೊಡಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News