ದ.ಕ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ಗೆ 15 ಮಂದಿ ಬಲಿ, 374 ಮಂದಿಗೆ ಸೋಂಕು ದೃಢ

Update: 2021-06-22 16:37 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ.22: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 15 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,080ಕ್ಕೇರಿದೆ. ಅಲ್ಲದೆ ಮಂಗಳವಾರ ಜಿಲ್ಲೆಯಲ್ಲಿ 374 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ.5.68ಕ್ಕೇರಿದೆ. ಈವರೆಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿಗೊಗಾದವರ ಸಂಖ್ಯೆ 89,623ಕ್ಕೇರಿದೆ.

ಮಂಗಳವಾರ 556 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖರಾದವರ ಸಂಖ್ಯೆ 81,723ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 6,820 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರೆಗೆ 9,79,139 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 8,89,516 ಮಂದಿಯ ವರದಿ ನೆಗೆಟಿವ್ ಬಂದಿದೆ.

ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಘಿಸಿದ 73,066 ಮಂದಿಯಿಂದ 88,75,317 ರೂ. ದಂಡ ವಸೂಲು ಮಾಡಲಾಗಿದೆ.

16,826 ಮಂದಿಗೆ ಕೋವಿಡ್ ಲಸಿಕೆ ನೀಡಿಕೆ

ದ.ಕ.ಜಿಲ್ಲೆಯಲ್ಲಿ ಮಂಗಳವಾರ 16,826 ಮಂದಿಗೆ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 1,176 ಮಂದಿ ಮೊದಲನೇ ಡೋಸ್ ಮತ್ತು 182 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 165 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲನೇ ಡೋಸ್, 25 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 82 ಮಂದಿ ಫ್ರಂಟ್‌ಲೈನ್ ವರ್ಕರ್ಸ್‌ ಮೊದಲನೇ ಡೋಸ್, 8 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ 3713 ಮಂದಿ ಮೊದಲನೇ ಡೋಸ್, 158 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 18 ವರ್ಷದಿಂದ 44 ವರ್ಷದೊಳಗಿನ 11258 ಮಂದಿ ಮೊದಲನೇ ಡೋಸ್ ಮತ್ತು 59 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಗೆ 23,000 ಡೋಸ್ ಲಸಿಕೆ

ದ.ಕ. ಜಿಲ್ಲೆಗೆ ಮಂಗಳವಾರ 23,000 ಡೋಸ್ ಕೋವಿಶೀಲ್ಡ್ ಲಸಿಕೆ ಸರಬರಾಜು ಆಗಿದೆ. ಜಿಲ್ಲೆಯಿಂದ ತಾಲೂಕುಗಳಿಗೆ ಲಸಿಕೆ ಹಂಚಿಕೆ ಕಾರ್ಯವೂ ನಡೆದಿದೆ. ಈ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಮತ್ತು ಆದ್ಯತಾ ಗುಂಪಿನವರಿಗೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಬ್ಲ್ಯಾಕ್ ಫಂಗಸ್‌ಗೆ ಬೇಕಾದ ಅಪೊಂಟೇರಿಸಿನ್ 800 ಡೋಸ್‌ ಜಿಲ್ಲೆಗೆ ಬಂದಿದೆ. ಈ ಮೂಲಕ ಬ್ಲ್ಯಾಕ್ ಫಂಗಸ್ ಕುರಿತಾದ ಔಷಧದ ಸಮಸ್ಯೆ ಬಗೆಹರಿದಂತಾಗಿದೆ.

ಪಿಯು ಉಪನ್ಯಾಸಕರಿಗೆ ಲಸಿಕೆ
ದ.ಕ.ಜಿಲ್ಲೆಯ 800ಕ್ಕೂ ಅಧಿಕ ಪಿಯು ಉಪನ್ಯಾಸಕರಿಗೆ ಲಸಿಕೆ ನೀಡುವ ಕಾರ್ಯ ಶೀಘ್ರ ನಡೆಯಲಿದೆ. ಈಗಾಗಲೇ ದ.ಕ.ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಅಸೋಸಿಯೇಶನ್ 800 ಉಪನ್ಯಾಸಕರ ಪಟ್ಟಿಯೊಂದನ್ನು ಆರೋಗ್ಯ ಇಲಾಖೆಗೆ ರವಾನಿಸಿದೆ. ಒಂದೆರಡು ದಿನಗಳಲ್ಲಿ ಅದ್ಯತಾ ವಲಯದಲ್ಲಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News