ವೈದ್ಯರಿಂದ ಚಿಕಿತ್ಸೆ ನಿರಾಕರಣೆ ಆರೋಪ: ವಿಚಾರಣೆಗೆ ಹಾಜರಾಗಲು ನೋಟಿಸ್

Update: 2021-06-22 16:49 GMT

ಮಂಗಳೂರು, ಜೂ.22: ಎಂಟು ತಿಂಗಳ ಗರ್ಭಿಣಿ ಜಾಸ್ಮೀನ್ ಎಂಬಾಕೆಗೆ ನಗರದ ವೈದ್ಯೆ ಡಾ.ಪ್ರಿಯಾ ಬಲ್ಲಾಳ್ ಸಹಿತ ಕೆಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಜಾಸ್ಮೀನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷರಿಗೆ ಹಾಗೂ ಡಾ. ಪ್ರಿಯಾ ಬಲ್ಲಾಳ್ ಮತ್ತಿತರ ಆಸ್ಪತ್ರೆಗಳ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗಲು ದ.ಕ.ಜಿಲ್ಲಾ ಆರೋಗ್ಯ ಇಲಾಖೆಯು ನೋಟಿಸ್ ಜಾರಿಗೊಳಿಸಿದೆ.

ಜೂ.23ರ ಬೆಳಗ್ಗೆ 10:30ಕ್ಕೆ ವೆನ್ಲಾಕ್ ಆಸ್ಪತ್ರೆಯ ಕಚೇರಿಯಲ್ಲಿ ಹಾಜರಾಗಲು ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಜಾಸ್ಮಿನ್‌ಗೆ ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸಿದ ಪ್ರಕರಣವು ಭಾರೀ ಚರ್ಚೆಯಾಗಿತ್ತು. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಕುರಿತು ನೀಡಿರುವ ದೂರಿನ ವಿಚಾರಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆಯು ಸಂತ್ರಸ್ತೆ ಜಾಸ್ಮಿಗ್‌ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದೆ. ಅಲ್ಲದೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷರು ಮತ್ತು ಘಟನೆಗೆ ಸಂಬಂಧಪಟ್ಟ ಎಲ್ಲಾ ವೈದ್ಯರನ್ನು ಮತ್ತು ಆಸ್ಪತ್ರೆಗಳ ಮುಖ್ಯಸ್ಥರನ್ನು ಕೂಡ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಗಲ್ಫ್ ರಾಷ್ಟ್ರದಲ್ಲಿ ಪತಿಯೊಂದಿಗಿದ್ದ ತಾನು ಹೆರಿಗೆಗೆಂದು ತವರಿಗೆ ಬಂದಿದ್ದೆ. ಹೆರಿಗೆ ನೋವು ಕಾಣಿಸಿದಾಗ ಕುಟುಂಬ ವೈದ್ಯರಾಗಿದ್ದ ಡಾ.ಪ್ರಿಯಾ ಅವರನ್ನು ಸಂಪರ್ಕಿಸಿದ್ದೆ. ಅವರು ಬೇರೆ ಆಸ್ಪತ್ರೆಗಳಿಗೆ ಹೋಗುವಂತೆ ಹೇಳಿದ್ದರು. ಅಲ್ಲದೆ ಇತರ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡದಂತೆ ತಡೆದಿದ್ದರು ಎಂದು ಜಾಸ್ಮಿನ್ ಆರೋಪಿಸಿದ್ದರು. ಆದರೆ ವೈದ್ಯರು ಈ ಆರೋಪಗಳನ್ನು ತಿರಸ್ಕರಿಸಿದ್ದರು.

ಜಾಸ್ಮೀನ್ ಜಿಲ್ಲಾಡಳಿತದ ಮೊರೆ ಹೋಗಿದ್ದರು. ಅದರಂತೆ ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆಯ ಅಧೀನದಲ್ಲಿ ತನಿಖಾ ತಂಡವೊಂದನ್ನು ರಚಿಸಿದ್ದರು. ಇದೀಗ ಆ ತನಿಖಾ ತಂಡವು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News