ಶ್ಯಾಮ್ ಪ್ರಸಾದ್ ಪುಣ್ಯತಿಥಿ: 25,000 ಸಸಿ ನೆಡುವ ಅಭಿಯಾನ; ಕುಯಿಲಾಡಿ ಸುರೇಶ್ ನಾಯಕ್

Update: 2021-06-22 17:40 GMT

ಉಡುಪಿ, ಜೂ.22: ಭಾರತೀಯ ಜನಸಂಘದ ನೇತಾರ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯ ತಿಥಿಯ ದಿನವಾದ ಜೂ.23ರಿಂದ ಜನ್ಮ ದಿನವಾದ ಜು.6ರವರೆಗೆ ಜಿಲ್ಲೆಯ ಪ್ರತಿ ಬೂತ್ ಮಟ್ಟದಲ್ಲಿ ತಲಾ 25ರಂತೆ ಒಟ್ಟು 1,111ಬೂತ್‌ಗಳಲ್ಲಿ 25,000 ಸಸಿ ನೆಡುವ ಅಭಿಯಾನವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ತ್ಯಾಗ, ಬಲಿದಾನ, ಸಿದ್ಧಾಂತದ ಕುರಿತು ವಿಚಾರ ಸಂಕಿರಣ, ಕೆರೆ, ಬಾವಿ ಸಹಿತ ಜಲಮೂಲಗಳತ್ತ ವಿಶೇಷ ಗಮನ, ಕ್ಲೀನ್ ಇಂಡಿಯಾ ಹೆಲ್ದಿ ಇಂಡಿಯಾ ಘೋಷಣೆಯಡಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ನಡೆಸಲಾಗುವುದು ಎಂದರು.

1975ರಲ್ಲಿ ಕಾಂಗ್ರೆಸ್ ಪಕ್ಷ ಹೇರಿದ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ಜೂ.25ಕ್ಕೆ ಆಚರಿಸಲಾಗುವುದು. ಜೂ.27ಕ್ಕೆ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವು ಪ್ರತಿ ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಮಟ್ಟದಲ್ಲಿ ನಡೆಯಲಿದೆ. ಸೇವಾ ಹಿ ಸಂಘಟನ್ 2ರ ಅಂಗವಾಗಿ ಮೇರಾ ಬೂತ್, ವ್ಯಾಕ್ಸಿನೇಷನ್ ಯುಕ್‌ತಿ ಧ್ಯೇಯದಡಿ 45ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡು ಡೋಸ್ ಲಸಿಕೆ, 18+ಮೇಲ್ಪಟ್ಟ ಮುಂಚೂಣಿ ಕಾರ್ಮಿಕ ವರ್ಗಕ್ಕೆ ಆದ್ಯತೆ ಜತೆಗೆ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸಲು ಪ್ರೇರಣೆ, ಜನಸೇವೆ, ಕೋವಿಡ್ ಶಿಷ್ಟಾಚಾರ ಕುರಿತು ಜನಜಾಗೃತಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಶಿಲ್ಪಾ ಜಿ. ಸುವರ್ಣ, ಶ್ರೀನಿಧಿ ಹೆಗ್ಡೆ ಆತ್ರಾಡಿ, ಪ್ರತಾಪ್ ಶೆಟ್ಟಿ ಚೇಕಾರ್ಡಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಶಿವಕುಮಾರ್ ಅಂಬಲಪಾಡಿ, ಸತ್ಯಾನಂದ ನಾಯಕ್, ಸದಾನಂದ ಉಪ್ಪಿನ ಕುದ್ರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News