ನಮ್ಮ ಸಿಬ್ಬಂದಿಯ ಸುರಕ್ಷತೆಯನ್ನು ಪರಿಗಣಿಸಿ ಪತ್ರಿಕೆಯನ್ನು ಮುಚ್ಚಲಾಗುತ್ತಿದೆ: ಆ್ಯಪಲ್ ಡೇಲಿ ಕೊನೆಯ ಸಂಚಿಕೆ ಪ್ರಕಟ
ಹಾಂಕಾಂಗ್, ಜೂ. 23: ಪತ್ರಿಕೆಯ ಗುರುವಾರದ ಸಂಚಿಕೆ ಕೊನೆಯ ಸಂಚಿಕೆಯಾಗಿರುತ್ತದೆ ಎಂದು ಹಾಂಕಾಂಗ್ ನ ಪ್ರಜಾಪ್ರಭುತ್ವ ಪರ ಪತ್ರಿಕೆ ಆ್ಯಪಲ್ ಡೇಲಿ ಬುಧವಾರ ಪ್ರಕಟಿಸಿದೆ. ಕಠಿಣ ರಾಷ್ಟ್ರೀಯ ಭದ್ರತಾ ಕಾನೂನಿನನ್ವಯ ಪತ್ರಿಕೆಯ ಸೊತ್ತುಗಳನ್ನು ಸರಕಾರ ಮುಟ್ಟುಗೋಲು ಹಾಕಿದ ಹಿನ್ನೆಲೆಯಲ್ಲಿ ಅದು ಈ ನಿರ್ಧಾರಕ್ಕೆ ಬಂದಿದೆ.
ಆ್ಯಪಲ್ ಡೇಲಿ ಹಿಂದಿನಿಂದಲೂ ಚೀನಾದ ಪ್ರಭುತ್ವಕ್ಕೆ ಮಗ್ಗುಲ ಮುಳ್ಳಾಗಿತ್ತು. ಅದು ಹಾಂಕಾಂಗ್ ನ ಪ್ರಜಾಪ್ರಭುತ್ವ ಆಂದೋಲನಕ್ಕೆ ಸಂಫೂರ್ಣ ಬೆಂಬಲ ನೀಡಿತ್ತು ಹಾಗೂ ಚೀನಾದ ಸರ್ವಾಧಿಕಾರಿ ಧೋರಣೆಯ ನಾಯಕರನ್ನು ಟೀಕಿಸುತ್ತಾ ಬಂದಿತ್ತು.
ಪತ್ರಿಕೆಯನ್ನು ಮುಚ್ಚು ಇಚ್ಛೆಯನ್ನು ಚೀನಾದ ನಾಯಕರು ವ್ಯಕ್ತಪಡಿಸುತ್ತಾ ಬಂದಿದ್ದರು. ಈಗ ಹೊಸ ರಾಷ್ಟ್ರೀಯ ಭದ್ರತಾ ಕಾನೂನನ್ನು ಬಳಸಿ ಪ್ರಜಾಪ್ರಭುತ್ವ ಪರ ಪತ್ರಿಕೆಯನ್ನು ಮುಚ್ಚಲಾಗುತ್ತಿದೆ.
ಪತ್ರಿಕೆ ಮಾಲೀಕ ಜಿಮ್ಮ ಲಾಯ್, ಪ್ರಜಾಪ್ರಭುತ್ವ ಪರ ಧರಣಿಗಳಲ್ಲಿ ಭಾಗವಹಿಸಿರುವುದಕ್ಕಾಗಿ ಈಗ ಜೈಲಿನಲ್ಲಿದ್ದಾರೆ. ‘‘ನಮ್ಮ ಸಿಬ್ಬಂದಿಯ ಸುರಕ್ಷತೆಯನ್ನು ಪರಿಗಣಿಸಿ ಪತ್ರಿಕೆಯನ್ನು ಮುಚ್ಚಲಾಗುತ್ತಿದೆ’’ ಎಂದು ಬುಧವಾರ ಆ್ಯಪಲ್ ಡೇಲಿ ಪ್ರಕಟಿಸಿದೆ.