×
Ad

ಉಡುಪಿ: ಕೋವಿಡ್ ಗೆ ಮೂವರು ಬಲಿ; 135 ಮಂದಿಗೆ ಕೊರೋನ ಪಾಸಿಟಿವ್

Update: 2021-06-23 20:24 IST

ಉಡುಪಿ, ಜೂ.23: ಮಂಗಳವಾರವಷ್ಟೇ ಏರಡಂಕಿಗೆ (79) ಇಳಿದ ಜಿಲ್ಲೆಯ ಕೊರೋನ ಪಾಸಿಟಿವ್ ಇಂದು ಮತ್ತೆ 135ಕ್ಕೆ ಏರಿದೆ. ಬುಧವಾರ ಮೂವರು ಮಹಿಳೆಯರು ಸೋಂಕಿಗೆ ಬಲಿಯಾದರೆ, 229 ಮಂದಿ ಚಿಕಿತ್ಸೆ ಯಿಂದ ಗುಣಮುಖರಾಗಿದ್ದಾರೆ. ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1423ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಬುಧವಾರ ಜಿಲ್ಲೆಯಲ್ಲಿ ಮೂವರು ಹಿರಿಯ ಮಹಿಳೆಯರು ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 378ಕ್ಕೇರಿದೆ. ಕುಂದಾಪುರ ತಾಲೂಕಿನ 80 ಮತ್ತು 67 ವರ್ಷದ ಹಾಗೂ ಕಾರ್ಕಳ ತಾಲೂಕಿನ 64 ವರ್ಷ ಪ್ರಾಯದ ಮಹಿಳೆಯರು ಮೃತಪಟ್ಟಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್‌ನಂತೆ ಇವರೆಲ್ಲರೂ ಗಂಭೀರ ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಇತರ ದೈಹಿಕ ಸಮಸ್ಯೆಗಳಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾ ಗಿದ್ದರು. ಇವರಲ್ಲಿ ಒಬ್ಬರು ಮಂಗಳವಾರ ಹಾಗು ಇಬ್ಬರು ಇಂದು ಮೃತಪಟ್ಟರು.

ಇಂದು ಪಾಸಿಟಿವ್ ಬಂದ 135 ಮಂದಿಯಲ್ಲಿ 66 ಮಂದಿ ಪುರುಷರು ಹಾಗೂ 69 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 57, ಕುಂದಾಪುರ ತಾಲೂಕಿನ 31 ಹಾಗೂ ಕಾರ್ಕಳ ತಾಲೂಕಿನ 41 ಮಂದಿ ಅಲ್ಲದೇ ಆರು ಮಂದಿ ಹೊರಜಿಲ್ಲೆಯವರು ಸೇರಿದ್ದಾರೆ. ಇವರಲ್ಲಿ 18 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 117 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಮಂಗಳವಾರ 229 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 63,885ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3045 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 65,686 ಆಗಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,64,624 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಒಬ್ಬರಿಗೆ ಕಪ್ಪು ಶಿಲೀಂದ್ರ ಸೋಂಕು: ಜಿಲ್ಲೆಯಲ್ಲಿ ಬುಧವಾರ ಹಾವೇರಿಯ 54 ವರ್ಷ ಪ್ರಾಯದ ಪುರುಷರು ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಇಬ್ಬರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡರೆ, ಇದೀಗ ಮೂವರು ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News