ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಕುಮಾರ್
ಮಂಗಳೂರು, ಜೂ.23: ಅಡಿಕೆ ಮಾರುಕಟ್ಟೆಯಲ್ಲಿ ಪರಿಣಾಮಕಾರಿ ಪಾತ್ರವನ್ನು ಹೊಂದಿ ಕೃಷಿಕರ ಪಾಲಿನ ಆಪದ್ಬಾಂಧವ, ಕರಾವಳಿಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕರಾಗಿ ಎಚ್.ಎಂ. ಕೃಷ್ಣಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೃಷ್ಣ ಕುಮಾರ್ ಅವರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಯಿತು.
ಮೂಲತಃ ಆಹಾರ ತಂತ್ರಜ್ಞಾನ ಪರಿಣಿತರಾಗಿರುವ ಕೃಷ್ಣ ಕುಮಾರ್, ಮಂಗಳೂರು ವಿಶ್ವವಿದ್ಯಾಲಯದಿಂದ ರ್ಯಾಂಕ್‌ನೊಂದಿಗೆ ಬಿಎಸ್ಸಿ ಮತ್ತು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಿಂದ ಎಂಎಸ್ಸಿ ಪದವಿ ಪಡೆದಿದ್ದು, ಗುಣಮಟ್ಟ ಖಾತರಿ ವಿಷಯದಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.
ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿರುವ ಅವರು, ಕ್ಯಾಂಪ್ಕೊ ಸಂಸ್ಥೆಯಲ್ಲಿ ಸುಮಾರು 30 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಆಹಾರ ಭದ್ರತಾ ಪ್ರಾಧಿಕಾರದ ನಿಯಮಾನುಸಾರ ಅಡಿಕೆಯ ಪ್ರಮಾಣೀಕರಣಕ್ಕಾಗಿ ಮತ್ತು ಆ ಮೂಲಕ ಅಡಿಕೆ ಮಾರುಕಟ್ಟೆಯ ಭವಿಷ್ಯವನ್ನು ಸುಭದ್ರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿರುವುದಕ್ಕಾಗಿ ಕೃಷ್ಣ ಕುಮಾರ್ ಅವರನ್ನು ಅಭಿನಂದಿಸಿದ್ದು, ಸದಸ್ಯ ಬೆಳೆಗಾರರು ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.