ಶಾಲಾ- ಕಾಲೇಜು ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಸರಕಾರಕ್ಕೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಮನವಿ

Update: 2021-06-23 16:54 GMT

ಮಂಗಳೂರು, ಜೂ.23: ಸರಕಾರದ ಅರಿವು ನೆರವು, ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳ ಉತ್ತೀರ್ಣತೆ ಸೇರಿ ಪ್ರಮುಖ 4 ಸಮಸ್ಯೆಗಳ ಬಗ್ಗೆ ಸರಕಾರದ‌ ಗಮನ ಸೆಳೆಯುವ ಉದ್ದೇಶದಿಂದ ಇಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೂಲಕ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಮನವಿ ಸಲ್ಲಿಸಿತು.

ಕೋವಿಡ್ ಸಮಸ್ಯೆ ಮಧ್ಯೆ ಹಲವು ಕುಟುಂಬಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದು ಮಕ್ಕಳ ಶಾಲಾ ಶುಲ್ಕ ಪಾವತಿಸಲೂ ಕಷ್ಟಕರವಾಗಿದೆ. ಕೆಲವು ವಿದ್ಯಾಸಂಸ್ಥೆಗಳು ಡೊನೇಷನ್ ರೂಪದಲ್ಲಿ ಹೆಚ್ಚಿನ ಹಣ ಸಂಗ್ರಹಿಸುತ್ತಿದೆ. ಆದ್ದರಿಂದ ಸರಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಶಾಲಾ - ಕಾಲೇಜು ಶುಲ್ಕದಲ್ಲಿ ವಿನಾಯಿತಿ‌ ಮಾಡುವಂತೆ ನಿರ್ದೇಶನ ನೀಡಬೇಕು,‌ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅರಿವು ಸಾಲ ಸೌಲಭ್ಯವನ್ನು ಅವಲಂಬಿಸುತ್ತಾರೆ. ಈಗ ಸಾಲ‌ ಮಂಜೂರಾಗದ ಕಾರಣ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾಸಂಸ್ಥೆಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಅರಿವು ಸಾಲ ಶೀಘ್ರವಾಗಿ ಮಂಜೂರಾಗುವಂತೆ ಕ್ರಮ‌ಕೈಗೊಳ್ಳಬೇಕು. ಜೊತೆಗೆ ಬಡ್ಡಿ ರಹಿತ ಸಾಲ ಮಂಜೂರು ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಖಾಸಗಿಯಾಗಿ ಪಿಯುಸಿ ಪರೀಕ್ಷೆಗೆ ನೋಂದಾಯಿಸಿದ ಹಾಗೂ ಮರು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಬಗ್ಗೆಯಾಗಲಿ ಅಥವಾ ತೇರ್ಗಡೆಗೊಳಿಸುವುದರ ಬಗ್ಗೆಯಾಗಲಿ ಸರಿಯಾದ ಮಾಹಿತಿ ನೀಡದಿರುವುದರಿಂದ‌ ಅವರು ಆತಂಕಕ್ಕೀಡಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಸರ್ಕಾರದ ತೀರ್ಮಾನವನ್ನು ಆದಷ್ಟು ಬೇಗ ಪ್ರಕಟಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವ ವೈದ್ಯರು, ದಾದಿಯರು, ದಂತ ವೈದ್ಯರು ಮತ್ತು ಔಷಧ ತಜ್ಞರು ಆಯಾ ನಿಯಂತ್ರಕ ಸಂಸ್ಥೆಗಳ ಮೂಲಕ ನಿಯಂತ್ರಿಸಲಾಗುತ್ತದೆಯಾದರೂ ಆರೋಗ್ಯ ಸಂಬಂಧಿತ ವೃತ್ತಿಪರರು ಇನ್ನೂ ರಚನೆ ರಹಿತ ಮತ್ತು ಅನಿಯಂತ್ರಿತರಾಗಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಲಯದಲ್ಲಿ ವೃತ್ತಿಯಲ್ಲಿ ತೊಡಗಿಸಲು ಅಂಗೀಕಾರ ಸಿಗುತ್ತಿಲ್ಲ. ಆದ್ದರಿಂದ ಅತಿ ಶೀಘ್ರದಲ್ಲಿ ಎನ್‌ಸಿ‌ಎಹೆಚ್‌ಪಿ-21 ಅನುಷ್ಠಾನಗೊಳಿಸಬೇಕು. ಅಲೈಡ್ ಹೆಲ್ತ್ ವೃತ್ತಿ ಪರ ಕೌನ್ಸಿಲ್ ಸ್ಥಾಪಿಸಬೇಕು. ಈ‌ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ, ಪೋಷಕರ ಹಾಗೂ ಅಲೈಡ್ ಹೆಲ್ತ್ ವೃತ್ತಿಪರರ ಸಂಕಷ್ಟ ಬಗೆಹರಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಕೋಶಾಧಿಕಾರಿ ಎಂ.ಶರೀಫ್ ಬೆರ್ಕಳ, ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಇವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News