ಮಂಗಳೂರು: ಮಸ್ಜಿದುಲ್ ಇಹ್ಸಾನ್ ನಲ್ಲಿ ಎಚ್‌ಐಎಫ್‌ನಿಂದ ಕೋವಿಡ್ ಲಸಿಕಾ ಶಿಬಿರ
Update: 2021-06-24 12:55 IST
ಮಂಗಳೂರು, ಜೂ. 24: ಕಣಚೂರು ಆಸ್ಪತ್ರೆಯ ಸಹಯೋಗದಲ್ಲಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ (ಎಚ್‌ಐಎಫ್)ನಿಂದ ಕೋವಿಡ್ ಲಸಿಕಾ ಶಿಬಿರವನ್ನು ನಗರದ ವಾಸ್‌ಲೇನ್‌ನ ಮಸ್ಜಿದುಲ್ ಇಹ್ಸಾನ್ ನಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು.
ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಸೀದಿಯಲ್ಲಿ ಕೋವಿಡ್ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ.
''ಶಿಬಿರದಲ್ಲಿ ಸುಮಾರು 200 ಡೋಸ್ ಲಸಿಕೆ ನೀಡಲಾಗಿದೆ. ಮಸ್ಜಿದುಲ್ ಇಹ್ಸಾನ್ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಲ್ಲ, ಸಮಾಜ ಸೇವೆಯಲ್ಲಿ ನಿರಂತರವಾಗಿ ಗುರುತಿಸಿಕೊಂಡಿದೆ. ಇದಕ್ಕೂ ಮೊದಲು ಎಚ್1ಎನ್1, ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭ ಕೋವಿಡ್‌ಗೆ ಸತತ ಜಾಗೃತಿ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ'' ಎಂದು ಕೋವಿಡ್ ವಾರಿಯರ್ ತಂಡದ ಸಂಚಾಲಕ ರಿಝ್ವಾನ್ ಪಾಂಡೇಶ್ವರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಣಚೂರು ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹ್ಮಾನ್, ಎಚ್‌ಐಎಫ್‌ನ ಅಧ್ಯಕ್ಷ ಸಾಜಿದ್ ಎ.ಕೆ., ಮಸ್ಜಿದುಲ್ ಇಹ್ಸಾನ್ ಅಧ್ಯಕ್ಷ ಮುಹಮ್ಮದ್ ಅರಬಿ ಮತ್ತಿತರರು ಉಪಸ್ಥಿತರಿದ್ದರು.