'ಚಿಪ್ಸ್' ಹಂಚಿಕೆ ವಿವಾದದ ನಂತರ ತಜೀಂದರ್ ಬಗ್ಗಾ ದಿಲ್ಲಿ ಬಿಜೆಪಿ ವಾಟ್ಸ್ಯಾಪ್ ಗ್ರೂಪ್ ನಿಂದ ಹೊರಕ್ಕೆ?

Update: 2021-06-24 12:58 GMT
photo: twitter

ಹೊಸದಿಲ್ಲಿ: ದಿಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿರುವ ಸೂಚನೆಯೆಂಬಂತೆ ಪಕ್ಷದ  ದಿಲ್ಲಿ ಘಟಕದ ಪ್ರಮುಖ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್ ನಿಂದ ದಿಲ್ಲಿ ಬಿಜೆಪಿ ವಕ್ತಾರ ಎಂಬುದನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅವರು ಪಕ್ಷದ ರಾಜ್ಯ ಘಟಕದ ಎರಡು ವಾಟ್ಸ್ಯಾಪ್ ಗ್ರೂಪ್‍ಗಳಿಂದಲೂ ಹೊರಬಿದ್ದಿದ್ದಾರೆ ಎಂದು theprint.in ವರದಿ ಮಾಡಿದೆ.

ಬಗ್ಗಾ ಅವರಂತೆಯೇ ಮಾಜಿ ಸೀಎಂ ಮದನ್ ಲಾಲ್ ಖುರಾನ ಅವರ ಪುತ್ರ ಹರೀಶ್ ಖುರಾನ ಕೂಡ ದಿಲ್ಲಿ ಬಿಜೆಪಿಯ ವಾಟ್ಸ್ಯಾಪ್ ಗ್ರೂಪ್ ಅನ್ನು 20 ದಿನಗಳ ಹಿಂದೆ ತೊರೆದಿದ್ದಾರೆ. ಅವರು ಕೂಡ ಪಕ್ಷದ ವಕ್ತಾರರಾಗಿದ್ದು ಪಕ್ಷದ ಮಾಧ್ಯಮ ಘಟಕದ ಕಾರ್ಯವೈಖರಿ ಅವರಿಗೆ ಹಿಡಿಸಿಲ್ಲವೆನ್ನಲಾಗಿದೆ.

ಮೂಲಗಳ ಪ್ರಕಾರ ತಜೀಂದರ್ ಬಗ್ಗಾ ಅವರನ್ನು ವಾಟ್ಸ್ಯಾಪ್ ಗ್ರೂಪ್‍ಗಳಿಂದ ಕಳೆದ ವಾರ ತೆಗೆದು ಹಾಕಲಾಗಿದ್ದರೂ ನಂತರ ಅವರನ್ನು ಸೇರಿಸಲಾಗಿತ್ತು. ಆದರೆ ನಂತರ ಬಗ್ಗಾ ಅವರೇ ಗ್ರೂಪ್‍ಗಳನ್ನು ತ್ಯಜಿಸಿದ್ದಾರೆ ಎಂದು ವರದಿ ತಿಳಿಸಿದೆ.

ಕೋವಿಡ್ ವಾರಿಯರ್ಸ್ ಗೆ ಪಕ್ಷ ಪರಿಹಾರ ಸಾಮಗ್ರಿ ಎಂದು ಇತ್ತೀಚೆಗೆ ತಿಂಡಿ ಪ್ಯಾಕೆಟ್  ವಿತರಿಸಿರುವುದು ಅವರಿಗೆ ಖುಷಿ ನೀಡಿಲ್ಲವೆನ್ನಲಾಗಿದೆ.

ಪರಿಹಾರದ ನೆಪದಲ್ಲಿ ಪಕ್ಷ `ಚಿಪ್ಸ್' ವಿತರಿಸುವುದರ ಕುರಿತು ಟ್ವೀಟ್ ಮಾಡುವುದು ಬಗ್ಗಾ ಅವರಿಗಿಷ್ಟವಿರಲಿಲ್ಲವೆನ್ನಲಾಗಿದೆ.

ಮೇ 22ರಂದು ದಿಲ್ಲಿ ಬಿಜೆಪಿ ಘಟಕ ಕೊವಿಡ್ ವಾರಿಯರ್ಸ್ ಗೆ ನಾಚೋಸ್, ಕುರ್ಕುರೆ ಇತ್ಯಾದಿ ಸ್ನ್ಯಾಕ್ಸ್ ವಿತರಿಸಿತ್ತು.  ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿಶನ್ ರೆಡ್ಡಿ ಈ ಪ್ಯಾಕೆಟ್‍ಗಳನ್ನು ದಿಲ್ಲಿ ಬಿಜೆಪಿ ಅಧ್ಯಕ್ಷ ಅದೇಶ್ ಕುಮಾರ್ ಗುಪ್ತಾ ಅವರಿಗೆ ಹಸ್ತಾಂತರಿಸಿದ್ದರು.

ಪಕ್ಷದ ರಾಜ್ಯ ಘಟಕದಲ್ಲಿರುವ  ಭಿನ್ನಾಭಿಪ್ರಾಯಗಳ ಕುರಿತಂತೆ ಬಗ್ಗಾ ಈಗಾಗಲೇ ಕೇಂದ್ರ ನಾಯಕತ್ವದ ಜತೆ ಮಾತನಾಡಿದ್ದಾರೆಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News