ಜಮ್ಮು-ಕಾಶ್ಮೀರದ ನಾಯಕರೊಂದಿಗೆ ಮೂರು ಗಂಟೆ ಸಭೆ ನಡೆಸಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಜೂ.24: ಗುರುವಾರ ಜಮ್ಮು-ಕಾಶ್ಮೀರದಲ್ಲಿಯ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗಿ ಮೂರು ಗಂಟೆ ಕಾಲ ಮಾತುಕತೆಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ‘ದಿಲ್ಲಿ ಕಿ ದೂರಿ ಮತ್ತು ದಿಲ್ ಕಿ ದೂರಿ’ಯನ್ನು ನಿವಾರಿಸುವ ಬಗ್ಗೆ ಮಾತನಾಡಿದರಲ್ಲದೆ ಸೂಕ್ತ ಸಮಯ ಬಂದಾಗ ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಮರಳಿಸುವ ತನ್ನ ಬದ್ಧತೆಯ ಬಗ್ಗೆ ಭರವಸೆಯನ್ನು ನೀಡಿದರು.
2019ರ ಆಗಸ್ಟ್ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಬಳಿಕ ಪ್ರದೇಶದಲ್ಲಿ ರಾಜಕೀಯ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಎಂಟು ರಾಜಕೀಯ ಪಕ್ಷಗಳ 14 ಮುಖ್ಯವಾಹಿನಿ ನಾಯಕರು ಭಾಗವಹಿಸಿದ್ದರು.
ಮೋದಿಯವರು ಸೂಕ್ತ ಸಮಯದಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರಳಿಸುವುದಾಗಿ ಭರವಸೆ ನೀಡಿದರಾದರೂ ಚುನಾವಣೆಗಳನ್ನು ನಡೆಸಲು ಸಾಧ್ಯವಾಗುವಂತೆ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯಲ್ಲಿ ಕೈಜೋಡಿಸುವಂತೆ ಪಕ್ಷಗಳನ್ನು ಆಗ್ರಹಿಸಿದರು. ಪುನರ್ವಿಂಗಡಣೆಯು ಮುಗಿದ ಬೆನ್ನಲ್ಲೇ ಚುನಾವಣೆಗಳು ನಡೆಯಬಹುದು ಎಂದು ಮೋದಿಯವರು ಹೇಳಿದ್ದು,ಚುನಾವಣೆಯನ್ನು ಹೆಚ್ಚಿನ ನಾಯಕರು ಸ್ವಾಗತಿಸಿದರು ಎಂದು ಸರಕಾರದ ಮೂಲಗಳು ತಿಳಿಸಿದವು.
ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವುದು ಸಭೆಯ ಅಜೆಂಡಾದ ಮುಖ್ಯ ವಿಷಯವಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಕೇಂದವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದರು. ಯಶಸ್ವಿಯಾಗಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗಳಂತೆ ವಿಧಾನಸಭಾ ಚುನಾವಣೆಗಳನ್ನೂ ನಡೆಸುವುದು ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿದವು.
ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ, ಎನ್ಸಿ ವರಿಷ್ಠ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಉಮರ್ ಅಬ್ದುಲ್ಲಾ,ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್,ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಯ ಭೀಮಸಿಂಗ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಗೃಹಸಚಿವ ಅಮಿತ್ ಶಾ,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.
ತನ್ಮಧ್ಯೆ ಶಾ ಅವರು,ಸಭೆಯಲ್ಲಿ ಜಮ್ಮು-ಕಾಶ್ಮೀರದ ಭವಿಷ್ಯದ ಬಗ್ಗೆ ಚರ್ಚಿಸಲಾಯಿತು. ಸಂಸತ್ತಿನಲ್ಲಿ ಭರವಸೆ ನೀಡಿದ್ದಂತೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಕ್ಷೇತ್ರ ಪುನರ್ವಿಂಗಡನೆ ಪ್ರಕ್ರಿಯೆ ಮತ್ತು ಶಾಂತಿಯುತ ಮತದಾನ ಮಹತ್ವದ ಮೈಲಿಗಲ್ಲುಗಳಾಗಿವೆ ಎಂದು ಟ್ವೀಟಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದಲ್ಲಿ ಮಾತ್ರ ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಹೆಚ್ಚುಕಡಿಮೆ ಎಲ್ಲ ನಾಯಕರು ಅಸಮಾಧಾನಗೊಂಡಿದ್ದಾರೆ. ಇತರ ರಾಜ್ಯಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆಯನ್ನು 2026ರಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ,ಆದರೆ ಜಮ್ಮು-ಕಾಶ್ಮೀರವನ್ನು ಮಾತ್ರ ಏಕೆ ಪ್ರತ್ಯೇಕಿಸಲಾಗುತ್ತಿದೇ? ಕ್ಷೇತ್ರ ಪುನರ್ವಿಂಗಡಣೆಯ ಅಗತ್ಯವಿಲ್ಲ ಎಂದು ನಾವು ಪ್ರಧಾನಿಯವರಿಗೆ ತಿಳಿಸಿದ್ದೇವೆ. ಕೇಂದ್ರ ಮತ್ತು ಕಾಶ್ಮೀರದ ನಡುವಿನ ವಿಶ್ವಾಸವು ಮುರಿದುಬಿದ್ದಿದೆ ಎಂದರು.
ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ನೇತೃತ್ವದ ಗುಪ್ಕರ್ ಘೋಷಣೆಗಾಗಿ ಏಳು ಪಕ್ಷಗಳ ಮೈತ್ರಿಕೂಟವು ಪೂರ್ಣ ರಾಜ್ಯ ಸ್ಥಾನಮಾನ ಮತ್ತು ವಿಶೇಷ ಸ್ಥಾನಮಾನದ ಮರುಸ್ಥಾಪನೆಗೆ ಸಭೆಯಲ್ಲಿ ಆಗ್ರಹಿಸಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಮುಫ್ತಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು.