×
Ad

"2 ವರ್ಷಗಳಿಂದ ಸಂಬಳ ಪಾವತಿಸಿಲ್ಲ": ಬಿಜೆಪಿ ಮಾಜಿ ಶಾಸಕನ ಹೆಸರು ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ

Update: 2021-06-24 19:44 IST

ಹೊಸದಿಲ್ಲಿ: ಕಳೆದ ಎರಡು ವರ್ಷಗಳಿಂದ ಸಂಬಳ ನೀಡಲಿಲ್ಲ ಎಂದು ಶಾಲೆಯ ಮಾಲಕನ ಹೆಸರನ್ನು ಉಲ್ಲೇಖಿಸಿ ಪತ್ರ ಬರೆದು ಶಿಕ್ಷಕರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಿಲ್ಲಿಯ ಪೀತಾಂಪುರದಲ್ಲಿ ನಡೆದಿದೆ. ಶಿಕ್ಷಕನನ್ನು ತನೂಪ್‌ ಜೋಹರ್‌ ಎಂದು ಗುರುತಿಸಲಾಗಿದೆ. ಶಾಲೆಯ ಮಾಲಕ ಮಾಜಿ ಬಿಜೆಪಿ ಶಾಸಕನ ಕುರಿತು ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು indianexpress.com  ವರದಿ ಮಾಡಿದೆ. 

ತನೂಪ್‌ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದರು. ಅವರು ಶಾಲೆಯಲ್ಲಿ ಟೀಕ್ವಾಂಡೋ ಶಿಕ್ಷಕರಾಗಿದ್ದರು. ತನ್ನ ತಾಯಿ, ಸಹೋದರ ಮತ್ತು ಪತ್ನಿಯೊಂದಿಗೆ ಅವರು ವಾಸವಿದ್ದರು ಎಂದು ತಿಳಿದು ಬಂದಿದೆ,

ಪೊಲೀಸರು ಆತ್ಮಹತ್ಯಾ ಪತ್ರವನ್ನು ಪರಿಶೀಲಿಸಿದ್ದು, ಪತ್ರದಲ್ಲಿ ಶಾಲೆಯ ಮುಖ್ಯಸ್ಥ, ಬಿಜೆಪಿಯ ಮಾಜಿ ಶಾಸಕ ಹಾಗೂ ಆತನ ಪತ್ನಿಯ ಹೆಸರನ್ನು ಉಲ್ಲೇಖಿಸಿದ್ದು ಕಂಡು ಬಂದಿದೆ ಎಂದು ವರದಿ ತಿಳಿಸಿದೆ. ಕಳೆದ ಎರಡು ವರ್ಷಗಳಿಂದ ಸಂಬಳ ನೀಡದಿರುವ ಕಾರಣ ನಾನು ʼಡಿಸ್ಟರ್ಬ್‌ʼ ಆಗಿದ್ದೇನೆಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ತನೂಪ್‌ ತನ್ನ ಮನೆಯಿಂದಲೇ ಆನ್‌ ಲೈನ್‌ ಕ್ಲಾಸುಗಳನ್ನು ನಡೆಸುತ್ತಿದ್ದ. ಆದರೆ ಸಂಬಳ ಪಾವತಿಸದ ಕಾರಣ ಆತ ಅಸಮಾಧಾನಗೊಂಡಿದ್ದ. ಕಳೆದ ವರ್ಷದ ಲಾಕ್‌ ಡೌನ್‌ ಸಂದರ್ಭದಲ್ಲಿ ತನಗೆ ವೇತನ ಪಾವತಿಸಬೇಕೆಂದು ಆಡಳಿತ ಮಂಡಳಿಗೆ ಪತ್ರ ಬರೆದಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕೇಸ್‌ ದಾಖಲಾಗಿಲ್ಲ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News