ಶ್ರೀನಿವಾಸ್ ಬಜಾಲ್‌ರ 19ನೆ ಹುತಾತ್ಮ ದಿನಾಚರಣೆ
ಮಂಗಳೂರು, ಜೂ.24: ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಕಾ.ಶ್ರೀನಿವಾಸ್ ಬಜಾಲ್‌ರ 19ನೆ ಹುತಾತ್ಮ ದಿನಾಚರಣೆಯು ಗುರುವಾರ ಬಜಾಲ್‌ನಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಮುಖಂಡ ನಾಗರಾಜ್ ಬಜಾಲ್ ದೇಶದ ಸೌಹಾರ್ದ ಪರಂಪರೆಗೆ ಕೋಮುವಾದ ಎಂಬ ವಿಷವು ಸಮಾಜಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಡಿವೈಎಫ್‌ಐ ನಾಯಕ ಹುತಾತ್ಮ ಸಂಗಾತಿ ಶ್ರೀನಿವಾಸ್ 19 ವರ್ಷದ ಹಿಂದೆಯೇ ಮನಗಂಡಿದ್ದರು. ದೇಶದ ಶಾಂತಿ ಸೌಹಾರ್ದವನ್ನು ಹಾಳುಗೆಡಹುವ ಅಪಾಯಕಾರಿ ಸಿದ್ದಾಂತದ ವಿರುದ್ಧ ತನ್ನ ಕಾಲಾವಧಿಯಲ್ಲಿ ಅವಿರತವಾಗಿ ಶ್ರಮಿಸಿರುವ ಶ್ರೀನಿವಾಸ್ ಬಜಾಲ್ ಕೋಮುವಾದ ವಿರುದ್ಧದ ಹೋರಾಟಕ್ಕೆ ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.
ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ದೀಪಕ್ ಬಜಾಲ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ ಸುರೇಶ್ ಬಜಾಲ್, ಅಶೋಕ್ ಸಾಲ್ಯಾನ್, ಡಿವೈಎಫ್‌ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಜ್ ಬಜಾಲ್, ಪ್ರಕಾಶ್ ಶೆಟ್ಟಿ, ವರಪ್ರಸಾದ್ ಕುಲಾಲ್, ಸೋನಿಲ್, ಅಶೋಕ್ ಎನೆಲ್ಮಾರ್, ಜಗದೀಶ್ ಬಜಾಲ್, ಪ್ರವೀಣ್ ಶೆಟ್ಟಿ, ಜಗದೀಶ್ ಕುಲಾಲ್, ಕೃಷ್ಣ ಉಪಸ್ಥಿತರಿದ್ದರು.