‘ಆ್ಯಪಲ್ ಡೇಲಿ’ಯ ಕೊನೆಯ ಸಂಚಿಕೆಯ 10 ಲಕ್ಷ ಪ್ರತಿ ಮಾರಾಟ
ಹಾಂಕಾಂಗ್, ಜೂ. 24: ಹಾಂಕಾಂಗ್ ನ ಕೊನೆಯ ಪ್ರಜಾಪ್ರಭುತ್ವ ಪರ ಪತ್ರಿಕೆ ‘ಆ್ಯಪಲ್ ಡೇಲಿ’ಯ ಕೊನೆಯ ಸಂಚಿಕೆಯನ್ನು ಖರೀದಿಸಲು ಗುರುವಾರ ಹಾಂಕಾಂಗ್ನಾದ್ಯಂತ ಜನರು ಮುಗಿಬಿದ್ದರು.
ಬೆಳಗ್ಗೆ 8:30ರ ವೇಳೆಗೆ ಪತ್ರಿಕೆಯ 10 ಲಕ್ಷ ಪ್ರತಿಗಳು ನಗರದಾದ್ಯಂತದ ಪತ್ರಿಕೆ ಮಾರಾಟ ಅಂಗಡಿಗಳಲ್ಲಿ ಮಾರಾಟವಾದವು.
ಪತ್ರಿಕೆಯ 2.3 ಮಿಲಿಯ ಡಾಲರ್ ಮೌಲ್ಯದ ಸೊತ್ತುಗಳನ್ನು ಪೊಲೀಸರು ಮುಟ್ಟುಗೋಲು ಹಾಕಿರುವ ಹಿನ್ನೆಲೆಯಲ್ಲಿ ಪತ್ರಿಕೆಯನ್ನು ನಿಲ್ಲಿಸುವುದಾಗಿ ಪತ್ರಿಕೆಯ ಆಡಳಿತ ಬುಧವಾರ ಘೋಷಿಸಿದೆ. ಪತ್ರಿಕೆಯನ್ನು ದಮನಿಸಲು ಚೀನಾ ಸರಕಾರವು ಹಾಂಕಾಂಗ್ನಲ್ಲಿ ಹೊಸದಾಗಿ ಜಾರಿಗೆ ತರಲಾಗಿರುವ ರಾಷ್ಟ್ರೀಯ ಭದ್ರತಾ ಕಾನೂನನ್ನು ಬಳಸಿಕೊಂಡಿದೆ. ಹಾಂಕಾಂಗ್ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದ ಪ್ರಜಾಪ್ರಭುತ್ವ ಪರ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ಚೀನಾವು ಕಳೆದ ವರ್ಷ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೊಳಿಸಿದೆ.
ಪತ್ರಿಕೆಯ ಸೊತ್ತುಗಳನ್ನು ಮುಟ್ಟುಗೋಲು ಹಾಕಿರುವುದು ಮಾತ್ರವಲ್ಲ, ಹಾಂಕಾಂಗ್ ಪೊಲೀಸರು ಕಳೆದ ವಾರ ಪತ್ರಿಕೆಯ ಪ್ರಧಾನ ಕಚೇರಿಗೆ ದಾಳಿ ನಡೆಸಿ ಐವರು ಸಂಪಾದಕರು ಮತ್ತು ಅಧಿಕಾರಿಗಳನ್ನು ಬಂಧಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಈ ಪತ್ರಿಕೆಯು, ಹಾಂಕಾಂಗ್ನ ಸ್ವಾತಂತ್ರ್ಯಗಳನ್ನು ದಮನಿಸುತ್ತಿರುವುದಕ್ಕಾಗಿ ಚೀನಾ ಮತ್ತು ಹಾಂಕಾಂಗ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿತ್ತು.
1997ರಲ್ಲಿ ಬ್ರಿಟನ್ ಹಾಂಕಾಂಗನ್ನು ಚೀನಾಕ್ಕೆ ಹಸ್ತಾಂತರಿಸಿತ್ತು. ಈ ಸಂದರ್ಭದಲ್ಲಿ, ಹಾಂಕಾಂಗ್ನ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಚೀನಾ ಬ್ರಿಟನ್ಗೆ ವಾಗ್ದಾನ ನೀಡಿತ್ತು. ಆದರೆ, ಆ ಮಾತಿನಿಂದ ಚೀನಾ ಹಿಂದಕ್ಕೆ ಸರಿಯುತ್ತಿದೆ ಎಂಬುದಾಗಿ ಪತ್ರಿಕೆ ಆರೋಪಿಸುತ್ತಾ ಬಂದಿದೆ.