ಶ್ರೀಲಂಕಾ: 16 ಶಂಕಿತ ಎಲ್ಟಿಟಿಇ ಉಗ್ರರ ಸಹಿತ 93 ಖೈದಿಗಳ ಬಿಡುಗಡೆ
ಕೊಲಂಬೋ, ಜೂ.24: ಆರೋಪ ದಾಖಲಾಗದೆ ಬಂಧನದಲ್ಲಿದ್ದ 16 ಶಂಕಿತ ಎಲ್ಟಿಟಿಇ ಉಗ್ರರ ಸಹಿತ 93 ಖೈದಿಗಳಿಗೆ ಅಧ್ಯಕ್ಷರ ಕ್ಷಮಾದಾನ ಲಭಿಸಿದ ಹಿನ್ನೆಲೆಯಲ್ಲಿ ಗುರುವಾರ ಬಿಡುಗಡೆಗೊಳಿಸಲಾಗಿದೆ ಎಂದು ಶ್ರೀಲಂಕಾ ಸರಕಾರದ ಮೂಲಗಳು ಹೇಳಿವೆ. ದೇಶಕ್ಕೆ ಬೌದ್ಧಧರ್ಮ ಆಗಮಿಸಿದ ದಿನಾಚರಣೆಯ ಉತ್ಸವವಾದ ‘ಪೊಸೊನ್ ಪೊಯಾ’ ಕಾರ್ಯಕ್ರಮ ಸಂದರ್ಭ ಅಧ್ಯಕ್ಷ ಗೊತಬಯ ರಾಜಪಕ್ಸ ಖೈದಿಗಳಿಗೆ ಕ್ಷಮಾದಾನ ನೀಡುವುದಾಗಿ ಘೋಷಿಸಿರುವುದಾಗಿ ಬಂಧೀಖಾನೆ ಇಲಾಖೆಯ ವಕ್ತಾರ ತುಷಾರ ಉಪುಲ್ದೇನಿಯಾ ಹೇಳಿದರು.
ಭಯೋತ್ಪಾದನೆ ತಡೆ ಕಾಯ್ದೆಯಡಿ ಬಂಧಿಸಿ ಜಾಫ್ನಾ ಮತ್ತು ಅನುರಾಧಪುರದಲ್ಲಿ ಬಂಧನದಲ್ಲಿದ್ದ 16 ಶಂಕಿತ ಎಲ್ಟಿಟಿಇ ಉಗ್ರರನ್ನು ಬಿಡುಗಡೆಗೊಳಿಸಲಾಗಿದೆ. ಸುಮಾರು 20 ವರ್ಷದಿಂದ ಆರೋಪ ದಾಖಲಿಸದೆ ಬಂಧನಲ್ಲಿರಿಸಿದ್ದ 100 ತಮಿಳು ರಾಜಕೀಯ ಖೈದಿಗಳ ಬಿಡುಗಡೆಗೆ ಪ್ರಮುಖ ತಮಿಳು ಪಕ್ಷ ಟಿಎನ್ಎ ಹಾಗೂ ಇತರ ಮಾನವಹಕ್ಕು ಹೋರಾಟ ಸಂಘಟನೆ ಸರಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದವು.
ಶ್ರೀಲಂಕಾದ ಭಯೋತ್ಪಾದನೆ ತಡೆ ಕಾಯ್ದೆಯನ್ನು ರದ್ದುಗೊಳಿಸಲು ಆಗ್ರಹಿಸುವ ನಿರ್ಣಯವನ್ನು ಯುರೋಪಿಯನ್ ಸಂಸತ್ತು ಈ ತಿಂಗಳ ಆದಿಭಾಗದಲ್ಲಿ ಅಂಗೀಕರಿಸಿತ್ತು. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯ ಒಗ್ಗೂಡಿಸಿ ಪ್ರತ್ಯೇಕ ರಾಷ್ಟ್ರ ನಿರ್ಮಿಸುವ ಗುರಿಯೊಂದಿಗೆ ಸರಕಾರದ ಜತೆ ಸಂಘರ್ಷಕ್ಕಿಳಿದಿದ್ದ ಎಲ್ಟಿಟಿಇಯ ಮುಖಂಡ ವಿ ಪ್ರಭಾಕರನ್ 2009ರಲ್ಲಿ ಶ್ರೀಲಂಕಾ ಸೇನೆಯಿಂದ ಹತ್ಯೆಯಾಗುವುದರೊಂದಿಗೆ ಸುಮಾರು 30 ವರ್ಷದ ಸಶಸ್ತ್ರ ಹೋರಾಟ ಕೊನೆಗೊಂಡಿತ್ತು.