‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ಪತ್ರಕರ್ತರಿಂದ ಅರ್ಜಿ ಆಹ್ವಾನ
ಮಂಗಳೂರು, ಜೂ. 24: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ದ.ಕ.ಜಿಲ್ಲೆಗೆ ಸಂಬಂಧಿಸಿದಂತೆ ಸೌಹಾರ್ದತೆ, ಮಾನವೀಯ ಮೌಲ್ಯವನ್ನು ಬಿಂಬಿಸುವ ವರದಿಗೆ ನೀಡಲಾಗುವ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2020ನೇ ವರ್ಷದ ಪ್ರಶಸ್ತಿಗೆ ದ.ಕ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿ ತಲಾ 5,001 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಅರ್ಜಿಗಳನ್ನು ಕಳುಹಿಸಲು 2021 ಜುಲೈ 5 ಕೊನೆಯ ದಿನವಾಗಿದೆ.
ಪ್ರಶಸ್ತಿಗೆ 2020ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಪ್ರಕಟ/ಪ್ರಸಾರವಾದ ವರದಿಗಳನ್ನು ಪರಿಗಣಿಸಲಾಗುವುದು. ವರದಿಯಲ್ಲಿ ವರದಿಗಾರರ ಬೈಲೈನ್ ಅಗತ್ಯ. ಮುದ್ರಣ ಮಾಧ್ಯಮಗಳ ಪತ್ರಕರ್ತರು ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ನಾಲ್ಕು ಪ್ರತಿಗಳನ್ನು (ಒಂದು ಮೂಲಪ್ರತಿ ಕಡ್ಡಾಯ) ಸಲ್ಲಿಸಬೇಕು. ವರದಿ ಪ್ರಕಟವಾದ ದಿನಾಂಕದ ಕುರಿತಂತೆ ಸೂಕ್ತ ದಾಖಲೆ ಅಗತ್ಯ.
ಸ್ಥಳೀಯ/ರಾಜ್ಯ/ರಾಷ್ಟ್ರೀಯ ದೃಶ್ಯ ಮಾಧ್ಯಮಗಳ ಸುದ್ದಿ ವಿಭಾಗದಲ್ಲಿ ಪ್ರಸಾರವಾಗಿರುವ ವರದಿಯ ಬಗ್ಗೆ ವರದಿ ಪ್ರಸಾರವಾಗಿರುವ ದಿನಾಂಕ ಸಹಿತ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಯೂಟ್ಯೂಬ್‌ನ ಡಾಕ್ಯುಮೆಂಟರಿಗಳು, ಆನ್‌ಲೈನ್, ಬ್ಲಾಗ್ ಬರಹಗಳನ್ನು ಈ ವಿಭಾಗಕ್ಕೆ ಪರಿಗಣಿಸಲಾಗುವುದಿಲ್ಲ. ಆಯ್ಕೆಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಅರ್ಜಿಯನ್ನು ‘ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಲೇಡಿಹಿಲ್, ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು-6’ ಈ ವಿಳಾಸಕ್ಕೆ ಕಳುಹಿಸಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.