ಅತ್ಯಾಚಾರ ಸಂತ್ರಸ್ತೆಯ ಪತ್ರದ ಬಳಿಕ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಬದಲಿಸಿದ ಬಿಜೆಪಿ
ಉನ್ನಾವೊ, ಜೂ.25: ಅತ್ಯಾಚಾರ ಎಸಗಿದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಆಪ್ತನಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುದ್ದೆ ನೀಡದಂತೆ ಕೋರಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಬರೆದ ಪತ್ರದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿದೆ.
ಉನ್ನಾವೊದ ಬಂಗ್ರಮಾವು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಸೆಂಗಾರ್ ತನ್ನ ಮೇಲೆ 2017ರಲ್ಲಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದರು. ದಿಲ್ಲಿ ನ್ಯಾಯಾಲಯ 2019ರಲ್ಲಿ ಈ ಪ್ರಕರಣದಲ್ಲಿ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ನವಾಬ್‌ಗಂಜ್ ಬ್ಲಾಕ್ ಪಂಚಾಯತ್ ಅಧ್ಯಕ್ಷರಾಗಿರುವ ಅರುಣ್ ಸಿಂಗ್ ಅವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷ ಸೂಚಿಸಿದರೆ ತನ್ನ ಜೀವಕ್ಕೆ ಅಪಾಯವಿದೆ ಎಂದು ಈ ಅತ್ಯಾಚಾರ ಸಂತ್ರಸ್ತೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜುಲೈ 3ರಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರುಣ್ ಸಿಂಗ್ ಅವರ ಉಮೇದುವಾರಿಕೆಯನ್ನು ಬಿಜೆಪಿ ಪ್ರಕಟಿಸಿತ್ತು. ಸಂತ್ರಸ್ತೆ ಮಾಡಿದ ಆರೋಪವನ್ನು ಅಲ್ಲಗಳೆದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜ್‌ಕಿಶೋರ್ ರಾವತ್, ಈ ಆರೋಪ ಆಧಾರರಹಿತ ಹಾಗೂ ವಿರೋಧ ಪಕ್ಷಗಳ ಪಿತೂರಿ ಎಂದು ಹೇಳಿಕೆ ನೀಡಿದ್ದರು.
ಆದರೆ ಬಳಿಕ ಹೇಳಿಕೆ ನೀಡಿರುವ ರಾವತ್, "ಪಕ್ಷದ ನಾಯಕರ ನಿರ್ದೇಶನದಂತೆ ಅರುಣ್ ಸಿಂಗ್ ಅವರ ಉಮೇದುವಾರಿಕೆ ರದ್ದುಪಡಿಲಾಗಿದೆ. ಇದೀಗ ಮಾಜಿ ಶಾಸಕ ಅಜಿತ್ ಸಿಂಗ್ ಅವರ ಪತ್ನಿ ಶಕುನ್ ಸಿಂಗ್ ಪಕ್ಷದ ಅಭ್ಯರ್ಥಿಯಾಗಿರುತ್ತಾರೆ" ಎಂದು ಸ್ಪಷ್ಟಪಡಿಸಿದ್ದಾರೆ.