ನವಿ ಮುಂಬೈ ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಗ್ರೂಪ್ ಗೆ ವಹಿಸಿಕೊಡಲು ಮಹಾರಾಷ್ಟ್ರ ಸರಕಾರ ಸಮ್ಮತಿ
ಮುಂಬೈ: ನವಿ ಮುಂಬೈನ ಪನ್ವೇಲ್ ನಲ್ಲಿ ನಿರ್ಮಾಣವಾಗಲಿರುವ ನವ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ಗೆ ಅನುಮತಿ ನೀಡುವ ಪ್ರಸ್ತಾಪವನ್ನು ಮಹಾರಾಷ್ಟ್ರ ಸಂಪುಟ ಬುಧವಾರ ಅಂಗೀಕರಿಸಿದೆ.
ಈ ಹಿಂದೆ, ನವ ಮುಂಬೈಯ ಗ್ರೀನ್ ಫೀಲ್ಡ್ ಯೋಜನೆಯನ್ನು ಜಿವಿಕೆ ಏರ್ ಪೋರ್ಟ್ ಡೆವಲಪರ್ಸ್ ಲಿಮಿಟೆಡ್ (ಜಿವಿಕೆ ಎಡಿಎಲ್) ಅಭಿವೃದ್ಧಿಪಡಿಸಬೇಕಿತ್ತು.
ನವ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ರಿಯಾಯಿತಿ ಕಂಪನಿಯ ಮಾಲಕತ್ವವನ್ನು ಬದಲಾಯಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಯಿತು.
"ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಯೋಜನಾ ನಿಯಂತ್ರಣ ಹಾಗೂ ಅನುಷ್ಠಾನ ಸಮಿತಿಯ ನಿರ್ದೇಶನದಂತೆ, ಮಾಲಕತ್ವದಲ್ಲಿನ ಬದಲಾವಣೆಯನ್ನು ಸಭೆ ಅನುಮೋದಿಸಿತು" ಎಂದು ಮುಖ್ಯಮಂತ್ರಿಯ ಪಿಆರ್ ಒ ತಿಳಿಸಿದ್ದಾರೆ.
ಅದಾನಿ ಗ್ರೂಪ್ ಎರಡು ವಿದೇಶಿ ಸಂಸ್ಥೆಗಳಾದ ಎಸಿಎಸ್ಎ ಗ್ಲೋಬಲ್ ಲಿಮಿಟೆಡ್ ಹಾಗೂ ಬಿಡ್ ಸರ್ವೀಸಸ್ ಡಿವಿಷನ್ (ಮಾರಿಷಸ್) ಲಿಮಿಟೆಡ್ (ಬಿಡ್ವೆಸ್ಟ್) ಹೊಂದಿರುವ ಶೇ 23.5 ರಷ್ಟು ಪಾಲನ್ನು 1,685.2 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ. ಒಟ್ಟಾರೆಯಾಗಿ, ಇದು ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇಕಡಾ 74 ರಷ್ಟು ಪಾಲನ್ನು ಪಡೆದುಕೊಂಡಿದೆ. ಇದರಲ್ಲಿ ಜಿವಿಕೆ ಗ್ರೂಪ್ ಹೊಂದಿರುವ ಒಟ್ಟು 50.5 ಶೇಕಡಾ ಪಾಲನ್ನು ಒಳಗೊಂಡಿದೆ. ಈ ಸ್ವಾಧೀನದ ಮೂಲಕ ನವ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಹಕ್ಕನ್ನು ಸಹ ಪಡೆದುಕೊಂಡಿದೆ.
ನವ ಮುಂಬೈಯಲ್ಲಿ 1,160 ಹೆಕ್ಟೇರ್ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಗಾಗಿ ಭೂ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ.
ವಿಮಾನ ನಿಲ್ದಾಣದ ಮೊದಲ ಹಂತವು 2023-24ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಿಡ್ಕೊ ಈ ಯೋಜನೆಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.