×
Ad

ವಾರಾಂತ್ಯ ಕರ್ಫ್ಯೂ ಆದೇಶ ಉಲ್ಲಂಘಿಸಿ ಬೀದಿಗಿಳಿದರೆ ದಂಡ: ಪುತ್ತೂರು ಉಪವಿಭಾಗಾಧಿಕಾರಿ ಎಚ್ಚರಿಕೆ

Update: 2021-06-25 13:47 IST

ಪುತ್ತೂರು, ಜೂ.25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ದರ ಶೇ.5ಕ್ಕಿಂತ ಹೆಚ್ಚಿದ್ದರಿಂದ ಶುಕ್ರವಾರ ಸಂಜೆ ಗಂಟೆ 7ರಿಂದ ಸೋಮವಾರ ಬೆಳಗ್ಗೆ ಗಂಟೆ 7ರ ತನಕ ಕಟ್ಟುನಿಟ್ಟಿನ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಪುತ್ತೂರು ಉಪವಿಭಾಗದಲ್ಲಿ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಎಚ್ಚರಿಸಿದ್ದಾರೆ.

ವಾರಂತ್ಯದ ಕರ್ಫ್ಯೂವಿನಲ್ಲಿ ಮೆಡಿಕಲ್, ಆಸ್ಪತ್ರೆಗಳ ಭೇಟಿ, ತುರ್ತು ಅಗತ್ಯ ಸೇವೆ, ಅನುಮತಿ ಪಡೆದ ಮದುವೆ, ಅಂತ್ಯಕ್ರಿಯೆ ಹೊರತು ಬೇರೆಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಹೊಟೇಲ್‌ಗಳಲ್ಲಿ ಪಾರ್ಸೆಲ್ ಸರ್ವಿಸ್‌ಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಿಳಿದರೆ ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ -2005 ಕಲಂ 51 ರಿಂದ 60ರ ಅನ್ವಯ ಐಪಿಸಿ ಕಲಂ 188ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ಕಲಂ 4, 5 ಮತ್ತು 10 ರಂತೆ ದಂಡ ವಿಧಿಸಿ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇತರ ದಿನದ ಕರ್ಫ್ಯೂವಿನಲ್ಲಿ ಅಪರಾಹ್ನ2ಕ್ಕೆ ವ್ಯವಹಾರ ಸ್ಥಗಿತಗೊಳಿಸಿ:

ದ.ಕ. ಜಿಲ್ಲಾಡಳಿತವು ಜೂ.23ರಿಂದ ಬೆಳಗ್ಗೆ ಗಂಟೆ 7ರಿಂದ ಅಪರಾಹ್ನ 2ರ ತನಕ ಎಲ್ಲಾ ಅಂಗಡಿಗಳು ಮತ್ತು ನಾನ್ ಎ.ಸಿ. ಅಂಗಡಿಗಳ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಆದರೆ ಆದೇಶದಲ್ಲಿ ಕೋವಿಡ್ ಸಮುಚಿತ ವರ್ತನೆಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜನರು ಸುರಕ್ಷಿತ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದನ್ನು ಪಾಲನೆ ಮಾಡದವರ ವಿರುದ್ಧ ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತ ಮತ್ತು ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದಂಡವನ್ನು ವಿಧಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ನಾನು ಈಗಾಗಲೇ ಸೂಚನೆ ನೀಡಿದ್ದೇನೆ. ಎಲ್ಲಾ ವ್ಯಾಪಾರಸ್ಥರು, ಅಂಗಡಿ ಮಳಿಗೆಯವರು ಅಪರಾಹ್ನ 2 ಗಂಟೆಯ ಒಳಗೆ ಶೀಘ್ರವಾಗಿ ಬಂದ್ ಮಾಡಬೇಕು ಮತ್ತು ಅಂಗಡಿಗೆ ಬರುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮ ಕೈಗೊಳ್ಳಬೇಕು. ಅಂಗಡಿಯೊಳಗೆ ಮಾಸ್ಕ್ ಧರಿಸದಿರುವುದು ಕಂಡು ಬಂದರೆ ಅಂಗಡಿ ಮಾಲಕರ ವಿರುದ್ಧ ದಂಡ ವಿಧಿಸಲಾಗುತ್ತದೆ. ಹೆಚ್ಚು ಸಿಬ್ಬಂದಿಯಿರುವ ಅಂಗಡಿ ಸಂಸ್ಥೆಗಳು ರೊಟೇಷನ್ ರೀತಿಯಲ್ಲಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳುವುದು ಮತ್ತು ಸಿಬ್ಬಂದಿಯನ್ನು ಮನೆಗೆ ತಲುಪಲು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಬೇಕು. ಇದನ್ನು ಪಾಲನೆ ಮಾಡಿದರೆ 2 ಗಂಟೆಯಿಂದ ಮರುದಿನ ಮುಂಜಾನೆ ತನಕ ಇರುವ ಕರ್ಫ್ಯೂ ಅವಧಿಯಲ್ಲಿ ಯಾವುದೇ ಗೊಂದಲ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News