×
Ad

ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಜಾಗ ಮರಳಿ ಸರಕಾರದ ವಶಕ್ಕೆ: ರಘುಪತಿ ಭಟ್

Update: 2021-06-25 15:57 IST

ಉಡುಪಿ, ಜೂ.25: ವಕ್ಫ್ ಬೋರ್ಡ್ ಮೂಲಕ ಕೊಡವೂರು ಪಳ್ಳಿಜಿಡ್ಡದ ಕಲ್ಮತ್ ಮಸೀದಿಗೆ ಮಂಜೂರು ಮಾಡಲಾದ ಕೊಡವೂರು ಗ್ರಾಮದ ಸರ್ವೆ ನಂ 53/6ರಲ್ಲಿ 0.67 ಸೆಂಟ್ಸ್ ಜಾಗವನ್ನು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಂತೆ ಮರಳಿ ವಶಕ್ಕೆ ಪಡೆದು ಜೂ.22ರಂದು ಸರಕಾರದ ಹೆಸರಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಮಸೀದಿಗೆ ಈ ಜಾಗವನ್ನು ಮಂಜೂರು ಮಾಡಿರುವ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಂದಾಯ ಸಚಿವರನ್ನು ಭೇಟಿಯಾಗಿ ಸ್ಥಳೀಯ ಸ್ಥಿತಿಗತಿಯನ್ನು ಮನವರಿಕೆ ಮಾಡಿ ಈ ಜಾಗವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದ್ದು, ಅದನ್ನು ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದೆ. ಅದರಂತೆ ಸಚಿವರ ಸೂಚನೆ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಸಲ್ಲಿಸಿರುವ ಸ್ಥಳೀಯ ಸ್ಥಿತಿಗತಿಗಳ ವರದಿಯನ್ನು ಸಲ್ಲಿಸಿದ್ದರು ಎಂದು ರಘುಪತಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2018ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿ ಯವರು ಈ ಜಾಗವನ್ನು ವಕ್ಫ್ ಬೋರ್ಡ್ ಮುಖೇನ ಕಲ್ಮತ್ ಮಸೀದಿ ಇವರ ಹೆಸರಿಗೆ ಮಂಜೂರು ಮಾಡಲು ಶಿಫಾರಸು ಮಾಡಿದ್ದರು. ಈ ಜಾಗವನ್ನು ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ನಾವು ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಜಾಗವನ್ನು ಮರಳಿ ಸರಕಾರದ ವಶಕ್ಕೆ ಪಡೆಯುವಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಕಂದಾಯ ಸಚಿವರಿಗೆ ಕೃತಜ್ಞತೆಗಳು ಎಂದು ರಘುಪತಿ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News