ಹಡೀಲು ಭೂಮಿಯಲ್ಲಿ ಕೃಷಿಗೆ ಒತ್ತು : ಸಚಿವ ಬಿ.ಸಿ. ಪಾಟೀಲ್
ಮಂಗಳೂರು, ಜೂ. 25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8000 ಎಕರೆ ಹಡೀಲು ಭೂಮಿಯಿದ್ದು, ಅಲ್ಲಿ ಕೃಷಿಗೆ ಇರುವ ಕಾನೂನು ತೊಡಕು ಗಳನ್ನು ನಿವಾರಿಸುವುದು ಹಾಗೂ ಸಹಕಾರ ಸಂಸ್ಥೆಯ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ದ.ಕ. ಜಿಲ್ಲೆಯ ಮುಂಗಾರು ಪೂರ್ವ ಸಿದ್ಧತೆಯ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಭ್ಯವಿರುವ ಹಡೀಲು ಭೂಮಿಯಲ್ಲಿ ಸುಮಾರು 3000 ಎಕರೆ ಭೂಮಿಯಲ್ಲಿ ಈ ಬಾರಿ ಕೃಷಿಗೆ ಸ್ಥಳೀಯ ಶಾಸಕರು ನಿರ್ಧರಿಸಿದ್ದಾರೆ ಎಂದವರು ಹೇಳಿದರು.
ಕೃಷಿ ಚಟುವಟಿಕೆಗಳ ಸಮಗ್ರ ವರದಿಗೆ ಸೂಚನೆ
ಕರಾವಳಿಯು ಭೌಗೋಳಿಕವಾಗಿ ವಿಭಿನ್ನವಾಗಿರುವುದರಿಂದ ಇಲ್ಲಿನ ಕೃಷಿ ಚಟುವಟಿಕೆಗಳು ಕೂಡಾ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿದೆ. ಹಾಗಾಗಿ ಇಲ್ಲಿನ ಕೃಷಿಗೆ ಪೂರಕವಾಗಿ ಸೂಕ್ತ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ತಯಾರಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಹೆಕ್ಟೇರೊಂದಕ್ಕೆ 7500 ರೂ.ನಂತೆ ಭತ್ತ ಕೃಷಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಲಾಗಿದ್ದು, ಅದನು ಮುಂದುವರಿಸಲು ಹಾಗೂ ಬಂಟ್ವಾಳದ ರೈತ ಸಂಪರ್ಕ ಕೇಂದ್ರದಲ್ಲಿ ಈ ಬಾರಿ ಕೃಷಿ ಯಂತ್ರ ಧಾರೆ ಮಂಜೂರು ಮಾಡಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ವಿತರಿಸುವ ನಿಟ್ಟಿನಲ್ಲಿ 12 ಲಕ್ಷ ಕ್ವಿಂಟಾಲ್ ಅಕ್ಕಿಯ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ನವೆಂಬರ್‌ನಲ್ಲಿ ಆಹಾರ ಇಲಾಖೆಯ ಮೂಲಕ ಕುಚ್ಚಲಕ್ಕಿ ದ.ಕ. ಜಿಲ್ಲೆಗೆ ವಿತರಣೆಯಾಗುವ ಸಾಧ್ಯತೆ ಇದೆ. ಈ ನಡುವೆ ಪ್ರಸ್ತುತ ಗುರುತು ಮಾಡಲಾಗಿರುವ ಹಡೀಲು ಭೂಮಿಯಿಂದ ಹೆಕ್ಟೇರೊಂದಕ್ಕೆ 15 ಕ್ವಿಂಟಾಲ್ ಅಕ್ಕಿಯಂತೆ ಜಿಲ್ಲೆಯಲ್ಲಿ ಸುಮಾರು 20000 ಕ್ವಿಂಟಾಲ್ ಅಕ್ಕಿ ಬೆಳೆಯುವ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಗೋಷ್ಠಿಯಲ್ಲಿ ಶಾಸಕರಾದ ರಾಜೇಶ್ ನಾಯ್ಕ್ , ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಮೊದಲಾದವರು ಉಪಸ್ಥಿತರಿದ್ದರು.