ಮಸೀದಿ ಜಾಗದ ವಿಚಾರದಲ್ಲಿ ಶಾಸಕರಿಂದ ಅನ್ಯಾಯ: ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ
ಉಡುಪಿ, ಜೂ.25: ಕೊಡವೂರು ಕಲ್ಮತ್ ಮಸೀದಿಗೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್ ಅನ್ಯಾಯ ಎಸಗಿದ್ದಾರೆ ಎಂದು ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ ಆರೋಪಿಸಿದ್ದಾರೆ.
ಸಾಮಾನ್ಯ ಜನರು ಕಂದಾಯ ಇಲಾಖೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾದರೆ ವರ್ಷನುಗಟ್ಟಲೆ ಅಲೆದಾಡಬೇಕಾಗುತ್ತದೆ. ಆದರೆ ಕೊಡವೂರು ಕಲ್ಮತ್ ಮಸೀದಿಯ ಡಿನೋಟಿಫಿಕೇಶನ್ ಹಾಗೂ ಆರ್‌ಟಿಸಿಯಲ್ಲಿ ಹೆಸರು ಬದಲಾವಣೆ ತರಾತುರಿ ಹಾಗೂ ಕೆಲವೇ ದಿನಗಳಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸರಕಾರವೇ ಈ ಮಸೀದಿ ಜಾಗವನ್ನು ವಕ್ಫ್ ಬೋರ್ಡಿಗೆ ನೋಟಿಫೈ ಮಾಡಿತ್ತು. ಅದು ಮಾಡುವ ಮುನ್ನ ಅದಕ್ಕೆ ಬೇಕಾದ ಕಾನೂನಾತ್ಮಕ ಪ್ರತ್ರಿಯೆ ನಡೆಸಿಯೇ ಮಾಡಿತ್ತು. ಆದರೆ ಶಾಸಕ ರಘುಪತಿ ಭಟ್ ಏಕಾಏಕಿ ಜಿಲ್ಲಾಧಿಕಾರಿ ಮೂಲಕ ಸರಕಾರವನ್ನು ಒತ್ತಾಯಿಸಿ ಇದನ್ನು ಮಾಡಿರುವುದು ತೀವ್ರ ಖಂಡನೀಯ. ಕೋಮುಸೌಹಾರ್ದಕ್ಕೆ ಧಕ್ಕೆ ತರುವ ಇಂತಹ ನಡೆಯ ವಿರುದ್ಧ ಮುಂದಿನ ದಿನಗಳಲ್ಲಿ ಬೀದಿಗೆ ಇಳಿದು ಹೋರಾಟ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.