ಜುಲೈ 1ರಿಂದ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಿಸಲು ಬಸ್ ಮಾಲಕರ ಸಂಘ ನಿರ್ಧಾರ
ಉಡುಪಿ, ಜೂ.25: ಕೋವಿಡ್-19 ಲಾಕ್‌ಡೌನ್ ಬಳಿಕ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಎಕ್ಸ್‌ಪ್ರೆಸ್, ಸರ್ವಿಸ್ ಹಾಗೂ ಸಿಟಿ ಬಸ್‌ಗಳ ಸಂಚಾರವನ್ನು ಜು.1ರಿಂದ ಹಂತಹಂತವಾಗಿ ಪುನರಾರಂಭಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ, ಶಾಸಕ ಕೆ.ರಘುಪತಿ ಭಟ್ ಉಪಸ್ಥಿತಿಯಲ್ಲಿ ಇಂದು ನಡೆದ ಖಾಸಗಿ ಬಸ್ ಮಾಲಕರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳೂ ಉಪಸ್ಥಿತರಿದ್ದರು. ರಾಜ್ಯ ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಶೇ.50ರಷ್ಟು ಸೀಟುಗಳನ್ನು ಮಾತ್ರ ತುಂಬಿ ಬಸ್ ಗಳನ್ನು ಓಡಿಸುವಂತೆ ತಿಳಿಸಲಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಸುರಕ್ಷತಾ ಅಂತರ ಕಾಯ್ದ ಕೊಳ್ಳುವಂತೆ ತಿಳಿಸಲಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯದಲ್ಲಿ ಲಾಕ್‌ಡೌನ್ ಹೇರಿದ ನಂತರ ನಿಲ್ಲಿಸಲ್ಪಟ್ಟ ಬಸ್ ಸಂಚಾರ, ಇದೀಗ ಅನ್‌ಲಾಕ್ ಆದರೂ ಪ್ರಾರಂಭಗೊಳ್ಳದ ಹಿನ್ನೆಲೆಯಲ್ಲಿ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಜನ ಸಾಮಾನ್ಯರು ಸಂಕಷ್ಟ ಪಡುವುದನ್ನು ಗಮನಿಸಿ, ಬಸ್ ಓಡಾಟವನ್ನು ಪುನರಾ ರಂಭಿಸುವ ಉದ್ದೇಶದಿಂದ ಇಂದಿನ ಸಭೆಯನ್ನು ಕರೆಯಲಾಗಿತ್ತು ಎಂದು ಭಟ್ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್, ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪದಾಧಿಕಾರಿಗಳಾದ ಸದಾನಂದ ಚಾತ್ರ, ಪ್ರಸಾದ್ ಬಲ್ಲಾಳ್, ಶಿವರಾಮ ಶೆಟ್ಟಿ, ಸಂದೀಪ್ ಮುಂತಾದವರು ಉಪಸ್ಥಿತರಿದ್ದರು.